ಪ್ರಯಾಗರಾಜ್: ಮಹಾ ಕುಂಭಮೇಳ ನಡೆಯುವ ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿ 15 ಜನ ಮೃತಪಟ್ಟಿರುವ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದೆ. ಕಾಲ್ತುಳಿತದಲ್ಲಿ (Maha Kumbh Stampede) ಗಾಯಗೊಂಡಿದ್ದವರನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿ ನಂದಿಸಿದ ಕಾರಣ ಮತ್ತೊಂದು ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಬುಧವಾರ ಬೆಳಗಿನ ಜಾವ ಕಾಲ್ತುಳಿತ ಸಂಭವಿಸುತ್ತಲೇ ಲಕ್ಷಾಂತರ ಜನ ವಿಚಲಿತರಾದರು. ನೂರಾರು ಜನ ದುರಂತದಲ್ಲಿ ಗಾಯಗೊಂಡಿದ್ದು, ಆಂಬುಲೆನ್ಸ್ ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತು. ಇದೇ ವೇಳೆ ಗಾಯಾಳುಗಳಿದ್ದ ಆಂಬುಲೆನ್ಸ್ ನಲ್ಲೂ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಗಾಯಾಳುಗಳು ಹೊರಗೆ ಬಂದ ಕಾರಣ ಅನಾಹುತ ತಪ್ಪಿತು ಎಂದು ತಿಳಿದುಬಂದಿದೆ.
ವದಂತಿಗಳಿಗೆ ಕಿವಿಗೊಡದಂತೆ ಯೋಗಿ ಮನವಿ
ಪ್ರಯಾಗರಾಜ್ ಕಾಲ್ತುಳಿತದ ಕುರಿತು ಸಿಎಂ ಯೋಗಿ ಆದಿತ್ಯನಾಥ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದು, “ಯಾರೂ ವದಂತಿಗಳಿಗೆ ಕಿವಿ ಕೊಡಬಾರದು” ಎಂದು ಮನವಿ ಮಾಡಿದ್ದಾರೆ. ತ್ರಿವೇಣಿ ಸಂಗಮ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಭದ್ರತಾ ಸಿಬ್ಬಂದಿಯು ಎಲ್ಲರಿಗೂ ಅಗತ್ಯ ನೆರವು ನೀಡಲಿದ್ದಾರೆ. ಯಾರೂ ಕೂಡ ವದಂತಿಗಳಿಗೆ ಕಿವಿ ಕೊಡಬಾರದು. ಸುಳ್ಳು ಸುದ್ದಿಗಳನ್ನು ಹರಡಿಸಬಾರದು ಎಂಬುದಾಗಿ ಯೋಗಿ ಮನವಿ ಮಾಡಿದ್ದಾರೆ.
ಮತ್ತೆ ಪುಣ್ಯಸ್ನಾನ ಆರಂಭ
ಕಾಲ್ತುಳಿತದ ಬಳಿಕ ತ್ರಿವೇಣಿ ಸಂಗಮದಲ್ಲಿ ಪರಿಸ್ಥಿತಿ ತಿಳಿಯಾಗಿದ್ದು, ಈಗ ಮತ್ತೆ ಪುಣ್ಯಸ್ನಾನ ಆರಂಭವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಬೆಳಗಿನ ಜಾವ ಕೋಟ್ಯಂತರ ಜನ ಸೇರಿದ್ದ ಕಾರಣ ಕಾಲ್ತುಳಿತ ಉಂಟಾಗಿದೆ. ಆದರೆ, ಈಗ ಪರಿಸ್ಥಿತಿ ತಿಳಿಯಾಗಿದೆ. ಜನರು ಶಾಂತಿಯುತವಾಗಿ, ಸರಾಗವಾಗಿ ಮತ್ತೆ ಪುಣ್ಯಸ್ನಾನ ಮಾಡುತ್ತಿದ್ದಾರೆ” ಎಂದು ಡಿಐಜಿ ವೈಭವ್ ಕೃಷ್ಣ ಮಾಹಿತಿ ನೀಡಿದ್ದಾರೆ. ಜನ ಸುಗಮವಾಗಿ ಪುಣ್ಯಸ್ನಾನ ಮಾಡಲು ಹೆಚ್ಚಿನ ಮುಂಜಾಗ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.