ಪ್ರಯಾಗ್‌ರಾಜ್: ಮಹಾಶಿವರಾತ್ರಿಯ ಕೊನೆಯ ಪುಣ್ಯಸ್ನಾನದ ಮೂಲಕ ಇಂದು ಜಗತ್ತಿನ ಅತಿದೊಡ್ಡ ಧಾರ್ಮಿಕ ಸಮಾವೇಶವಾದ ಮಹಾ ಕುಂಭಮೇಳಕ್ಕೆ ತೆರೆ ಬೀಳಲಿದೆ. 45 ದಿನಗಳ ಕಾಲ ನಡೆದ ಆಧ್ಯಾತ್ಮಿಕ ಜಾತ್ರೆ ಇಂದು ರಾತ್ರಿ ಸಂಪನ್ನಗೊಳ್ಳಲಿದೆ. ಕೊನೆಯ ದಿನವಾದ ಕಾರಣ ಪ್ರಯಾಗ್‌ರಾಜ್‌ಗೆ ಭಕ್ತರ ದಂಡೇ ಆಗಮಿಸುತ್ತಿದ್ದು, ಇಂದು 1 ಕೋಟಿಯಷ್ಟು ಮಂದಿ ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ನಿರೀಕ್ಷೆಯಿದೆ.
ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮದಲ್ಲಿ ಭಕ್ತಾದಿಗಳ ಸಾಗರವೇ ನೆರೆದಿದ್ದು, ಉತ್ತರಪ್ರದೇಶ ಸರ್ಕಾರದ ಅಂಕಿಅಂಶಗಳ ಪ್ರಕಾರ, ಮಂಗಳವಾರ ರಾತ್ರಿ 2 ಗಂಟೆಯ ವೇಳೆಗೆ 11.66 ಲಕ್ಷ ಮಂದಿ ಇಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಸಂಖ್ಯೆ 25.64 ಲಕ್ಷಕ್ಕೆ ಏರಿತ್ತು. ಬುಧವಾರ ಬೆಳಗ್ಗೆ 6 ಗಂಟೆಯ ವೇಳೆಗೆ 41.11 ಲಕ್ಷಕ್ಕೂ ಹೆಚ್ಚು ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ. ಸಂಜೆಯ ವೇಳೆಗೆ ಈ ಸಂಖ್ಯೆ ಒಂದು ಕೋಟಿಗೇರುವ ಸಾಧ್ಯತೆಯಿದೆ.
ಶಿವ ಮತ್ತು ಪಾರ್ವತಿಯ ದೈವಿಕ ಮಿಲನವನ್ನು ಮಹಾಶಿವರಾತ್ರಿ ದಿನವೆಂದು ಆಚರಿಸಲಾಗುತ್ತದೆ. ಮಹಾಕುಂಭ ಮೇಳದ ಕೊನೆಯ ದಿನವೂ ಶಿವರಾತ್ರಿಯ ದಿನವೇ ಆಗಿರುವ ಕಾರಣ ತ್ರಿವೇಣಿ ಸಂಗಮದಲ್ಲಿ ಮಿಂದು ಮೋಕ್ಷ ಪಡೆಯುವ ಹಂಬಲದಿಂದ ಅನೇಕರು ಪ್ರಯಾಗ್‌ಗೆ ತೆರಳಿದ್ದಾರೆ. ಅನೇಕ ಭಕ್ತರು ಮಧ್ಯರಾತ್ರಿಯೇ ಗಂಗಾತೀರದಲ್ಲಿ ನೆರೆದಿದ್ದು, ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಲು ಕಾಯುತ್ತಿದ್ದರು. ಅದಕ್ಕಿಂತ ಮೊದಲೇ ಹಲವರು ತಮ್ಮ ಪೂಜಾ ವಿಧಿಗಳನ್ನು ನೆರವೇರಿಸಿದ್ದರು.
ಕುಂಭಮೇಳದ ಕೊನೆಯ ದಿನ ಹಾಗೂ ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಭಕ್ತರಿಗೆ ಶುಭಕೋರಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಮಹಾಶಿವರಾತ್ರಿಯ ಈ ಪವಿತ್ರ ದಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವ ಎಲ್ಲಾ ಸಂತರಿಗೆ, ಕಲ್ಪವಾಸಿಗಳಿಗೆ ಮತ್ತು ಭಕ್ತಾದಿಗಳಿಗೆ ಹಾರ್ದಿಕ ಶುಭಾಶಯಗಳು. ಭೋಲೆನಾಥ ಮತ್ತು ಪವಿತ್ರ ಗಂಗಾಮಾತೆ ಎಲ್ಲರಿಗೂ ಆಶೀರ್ವಾದ ನೀಡಲಿ. ಹರ ಹರ ಮಹಾದೇವ” ಎಂದು ಟ್ವೀಟ್ ಮಾಡಿದ್ದಾರೆ.
ಆರು ಪುಣ್ಯ ಸ್ನಾನಗಳು
ಮಹಾಕುಂಭ ಮೇಳದಲ್ಲಿ 6 ಪುಣ್ಯ ಸ್ನಾನಗಳು ನಡೆದಿವೆ . ಪುಷ್ಯ ಪೂರ್ಣಿಮೆ (ಜನವರಿ 13), ಮಕರ ಸಂಕ್ರಾಂತಿ (ಜನವರಿ 14), ಮೌನಿ ಅಮಾವಾಸ್ಯೆ (ಜನವರಿ 29), ವಸಂತ ಪಂಚಮಿ (ಫೆಬ್ರವರಿ 3), ಮಾಘ ಪೂರ್ಣಿಮೆ (ಫೆಬ್ರವರಿ 12) ಮತ್ತು ಮಹಾಶಿವರಾತ್ರಿ (ಫೆಬ್ರವರಿ 26). ಇದರಲ್ಲಿ ಮೂರು “ಅಮೃತ ಸ್ನಾನ” ದಿನಗಳು ಸೇರಿವೆ. ಮಂಗಳವಾರ (ಫೆಬ್ರವರಿ 25) 1.33 ಕೋಟಿ ಮಂದಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದು, ಈ ಬಾರಿ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡವರ ಸಂಖ್ಯೆ ಈಗಾಗಲೇ 64 ಕೋಟಿ ದಾಟಿದ್ದು, ಇದು ಇಂದು ರಾತ್ರಿಯ ವೇಳೆಗೆ 65 ಕೋಟಿಗೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಸರ್ಪಗಾವಲು
ಸಂಗಮದಲ್ಲಿ ಭಕ್ತರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಡೀ ಪ್ರಯಾಗ್ ರಾಜ್ ನಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಭದ್ರತಾ ಸಿಬ್ಬಂದಿ ರಾತ್ರಿಯಿಡೀ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಕಣ್ಗಾವಲು ಡ್ರೋನ್‌ಗಳು, ಕೃತಕ ಬುದ್ಧಿಮತ್ತೆ ಚಾಲಿತ ಕ್ಯಾಮೆರಾಗಳೊಂದಿಗೆ ಸಿಸಿಟಿವಿ ಮೇಲ್ವಿಚಾರಣೆ ಮತ್ತು ಕಮಾಂಡ್ ಕೇಂದ್ರಗಳ ಮೂಲಕ ನಿಯಂತ್ರಣ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಡಲಾಗಿದೆ.
ಹೆಚ್ಚುವರಿ ರೈಲುಗಳು
ಭಕ್ತರ ಅನುಕೂಲಕ್ಕೆಂದು ಉತ್ತರ ಪೂರ್ವ ರೈಲ್ವೆ (NER) ಹೆಚ್ಚುವರಿ ರೈಲುಗಳನ್ನು ನಿಯೋಜಿಸಿದ್ದು, ಪ್ರಮುಖ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ರೈಲ್ವೆ ಅಧಿಕಾರಿ ಪಂಕಜ್ ಕುಮಾರ್ ಸಿಂಗ್ ಅವರು, ಫೆಬ್ರವರಿ 25 ರಂದು ಮಧ್ಯಾಹ್ನ 4 ಗಂಟೆಯವರೆಗೆ 60 ರೈಲುಗಳು ಚಲಿಸಿವೆ. ಮಹಾಶಿವರಾತ್ರಿ ದಿನ ಇನ್ನೂ 25 ಹೆಚ್ಚುವರಿ ವಿಶೇಷ ರೈಲುಗಳು ಸೇವೆ ನೀಡಲಿವೆ ಎಂದು ಮಾಹಿತಿ ನೀಡಿದ್ದಾರೆ.