ಬೆಂಗಳೂರು : ಮದ್ದೂರು ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಪರಮೇಶ್ವರ್, ಎಲ್ಲವೂ ನಿಯಂತ್ರಣದಲ್ಲಿದೆ. ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಪದೆ ಪದೆ ಇಂತಹ ಘಟನೆಗಳು ನಡೆಯುತ್ತಿವೆ. ಜನರೂ ಕೂಡ ಸರ್ಕಾರದೊಂದಿಗೆ, ವ್ಯವಸ್ಥೆಯೊಂದಿಗೆ ಸಹಕರಿಸಬೇಕು ಎಂದಿದ್ದಾರೆ.
ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಎಲ್ಲಾ ರೀತಿಯ ಕ್ರಮಗಳನ್ನೂ ಈ ಬಾರಿಯ ಗಣೇಶೋತ್ಸವಗಳ ವೇಳೆ ಕೈಗೊಂಡಿದ್ದೇವೆ. ಸೂಕ್ಷ್ಮ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳೂ ಭೇಟಿ ಕೊಟ್ಟಿದ್ದಾರೆ. ಆದರೂ, ಎರಡು ಮೂರು ಕಡೆ ಸಣ್ಣಪುಟ್ಟ ಘಟನೆಗಳಾಗಿವೆ, ಕ್ರಮ ತಗೊಂಡಿದ್ದೇವೆ. ಬಿಜೆಪಿಯವರಿಗೆ ಸರ್ಕಾರವನ್ನು ಸುಖಾಸುಮ್ಮನೆ ಟೀಕಿಸುವುದೇ ಕೆಲಸ ಎಂದು ಹೇಳಿದ್ದಾರೆ.
“ತುಮಕೂರಿನಲ್ಲೂ ಅದ್ಧೂರಿ ದಸರಾ ಆಚರಣೆ”
ತುಮಕೂರಿನಲ್ಲಿ ದಸರಾ ಆಚರಣೆಯಲ್ಲಿ ಈ ಬಾರಿ ವಿಶೇಷತೆ ಏನೂ ಇಲ್ಲ. ಊರ ಹಬ್ಬ ಮಾಡುತ್ತಿದ್ದೇವೆ. ನಾವು ಮಾರ್ನಮಿ ಎಂದು ಕರೆಯುತ್ತೇವೆ. 11 ದಿನಗಳ ಕಾಲವೂ ತುಮಕೂರಿನಲ್ಲಿ ದಸರಾ ಮಾಡುತ್ತೇವೆ. ಮೈಸೂರು ದಸರಾ ಹೇಗೆ ನಡೆಯುತ್ತದೋ ಅದೇ ಮಾದರಿಯಲ್ಲಿ ತುಮಕೂರಿನಲ್ಲಿಯೂ ನಡೆಸುತ್ತೇವೆ. ಯಾವುದೇ ರಾಜಕೀಯಕ್ಕೆ ಅವಕಾಶ ನೀಡುವುದಿಲ್ಲ. ಎಲ್ಲರನ್ನು ಒಳಗೊಂಡು ದಸರಾ ಆಚರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.



















