ಬೆಂಗಳೂರು : ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ (PS) ಸರ್ಫರಾಜ್ ಖಾನ್ ಮನೆ ಮೇಲೆ ಲೋಕಾಯುಕ್ತ ದಾಳಿಯ ವೇಳೆ ಸಿಕ್ಕಿರುವ ಆಸ್ತಿಯ ಮೌಲ್ಯ ಬಹಿರಂಗಗೊಂಡಿದೆ. ಇತ್ತಿಚೆಗೆ ಏಕಕಾಲಕ್ಕೆ ದಾಳಿ ನಡೆಸಿದ್ದ ಅಧಿಕಾರಿಗಳು, ಕೋಟಿ ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಹಲಸೂರಿನಲ್ಲಿರುವ ಸರ್ಫರಾಜ್ ಅವರ ನಿವಾಸ ಸೇರಿದಂತೆ ನಗರದ 5 ಮನೆಗಳು ಹಾಗೂ ಕೊಡಗಿನಲ್ಲಿರುವ ಐಷಾರಾಮಿ ರೆಸಾರ್ಟ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿತ್ತು. ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ, ಅಧಿಕಾರಿಗಳು ದಾಖಲೆಗಳನ್ನು ಜಾಲಾಡಿದಾಗ ಬೆಚ್ಚಿಬೀಳಿಸುವಂತಹ ಅಂಕಿಅಂಶಗಳು ಹೊರಬಂದಿವೆ. ಸರ್ಫರಾಜ್ ಖಾನ್ ಕೇವಲ ಒಬ್ಬ ಸರ್ಕಾರಿ ಅಧಿಕಾರಿಯಾಗಿದ್ದರೂ, ಅವರ ಬಳಿ ಇರುವ ಆಸ್ತಿ ಮಾತ್ರ ಕುಬೇರನನ್ನೂ ಮೀರಿಸುವಂತಿದೆ ಎನ್ನಲಾಗಿದೆ.
ದಾಳಿ ವೇಳೆ ಒಟ್ಟು 4 ಮನೆ, 8 ಕೋಟಿ ಮೌಲ್ಯದ 37 ಎಕರೆ ವ್ಯವಸಾಯದ ಜಮೀನು ಪತ್ರಗಳು ಸಿಕ್ಕಿವೆ. ಅಲ್ಲದೇ 66,500 ರೂಪಾಯಿ ನಗದು, 2.99 ಕೋಟಿ ಮೌಲ್ಯದ ಚಿನ್ನಾಭರಣ, ಐಷಾರಾಮಿ ಕಾರುಗಳು, 1 ಕೋಟಿ 29 ಸಾವಿರ ಠೇವಣಿ ಖಾತೆ ಸೇರಿ ಒಟ್ಟು ಆಸ್ತಿ 14.38 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಇನ್ನು ಮಡಿಕೇರಿ ತಾಲ್ಲೂಕಿನ ಗಾಳಿಬೀಡು ವ್ಯಾಪ್ತಿಯಲ್ಲಿ ಸರ್ಫರಾಜ್ ಖಾನ್ ಬೇನಾಮಿ ಹೆಸರಿನಲ್ಲಿ ಬೃಹತ್ ರೆಸಾರ್ಟ್ ನಡೆಸುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನಿಂದ ಬಂದ ಲೋಕಾಯುಕ್ತ ಅಧಿಕಾರಿಗಳ ವಿಶೇಷ ತಂಡವು ಈ ರೆಸಾರ್ಟ್ ಮೇಲೆ ದಾಳಿ ನಡೆಸಿ, ಭೂಮಿಯ ಖರೀದಿ ಪತ್ರ ಹಾಗೂ ಆದಾಯದ ಮೂಲಗಳ ಬಗ್ಗೆ ತನಿಖೆ ನಡೆಸುತ್ತಿದೆ. ಸದ್ಯ ಸರ್ಫರಾಜ್ ಖಾನ್ ಅವರ ಬ್ಯಾಂಕ್ ಅಕೌಂಟ್ ಮತ್ತು ಲಾಕರ್ ದಾಖಲೆಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ. ಸಚಿವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯ ಮೇಲೆ ನಡೆದಿರುವ ಈ ದಾಳಿ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ಉದಯನಿಧಿ ಸ್ಟಾಲಿನ್ ‘ಸನಾತನ’ ಹೇಳಿಕೆ ನರಮೇಧ, ಸಾಂಸ್ಕೃತಿಕ ಹತ್ಯೆಗೆ ಸಮ | ಅದು ದ್ವೇಷ ಭಾಷಣ ಎಂದ ಮದ್ರಾಸ್ ಹೈಕೋರ್ಟ್



















