ನವದೆಹಲಿ: ಭಾರತದ ಶ್ರೀಮಂತರ ಪಟ್ಟಿಯನ್ನು ಹುರುನ್ ಇಂಡಿಯಾ ರೀಸರ್ಚ್ ಸಂಸ್ಥೆ ಬಿಡುಗಡೆ ಮಾಡಿದ್ದು, ಖ್ಯಾತ ಉದ್ಯಮಿ ಅಂಬಾನಿ ಈ ಬಾರಿ ಪಟ್ಟ ಕಳೆದುಕೊಂಡಿದ್ದಾರೆ.
ಈ ಬಾರಿ ಭಾರತದ ಟಾಪ್ 10ರ ಶ್ರೀಮಂತರ ಪಟ್ಟಿಯಲ್ಲಿ ಬದಲಾವಣೆ ಕಂಡು ಬಂದಿದೆ. ಹಿಂದಿನ ವರ್ಷ ಬಿಡುಗಡೆಯಾಗಿದ್ದ ಟಾಪ್ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಮುಕೇಶ್ ಅಂಬಾನಿ ಈ ಬಾರಿ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. 2024ರ ಭಾರತದ ಅತೀ ದೊಡ್ಡ ಶ್ರೀಮಂತರಾಗಿ ಗೌತಮ್ ಅದಾನಿ ಇದ್ದಾರೆ. ಅದಾನಿ ಭಾರತದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದಾನಿ ಒಟ್ಟು ಆಸ್ತಿ ಬರೋಬ್ಬರಿ 11.6 ಲಕ್ಷ ಕೋಟಿ ರೂ. ಗೆ ಏರಿಕೆ ಕಂಡಿದೆ.
ಹುರುನ್ ಇಂಡಿಯಾ ನೀಡಿರುವ ಮಾಹಿತಿಯಂತೆ ಏಷ್ಯಾ ಖಂಡದಲ್ಲಿಯೇ ಭಾರತೀಯರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ ಎಂದು ಹೇಳಿದೆ. ಅಂದರೆ, ಇತ್ತೀಚಿಗೆ ಚೀನಾದ ಶ್ರೀಮಂತಿಕೆ ಕುಸಿಯುತ್ತಿದೆ ಎನ್ನಲಾಗಿದೆ. ಅಲ್ಲದೇ, ಭಾರತೀಯರ ಶ್ರೀಮಂತರಿಕೆ ಶೇ. 29 ರಷ್ಟು ಹೆಚ್ಚಳವಾಗಿದೆ. ಚೀನಾದ ಸಂಪತ್ತು ಶೇ. 25 ರಷ್ಟು ಕುಸಿತ ಕಂಡಿದೆ ಎಂದು ಹುರುನ್ ಇಂಡಿಯಾ ವರದಿ ಮಾಡಿದೆ.
ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಮುಕೇಶ್ ಅಂಬಾನಿ ಒಟ್ಟು ಆಸ್ತಿ 1,014,700 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಹೆಚ್‌ಸಿಎಲ್ ಟೆಕ್ನಾಲಜಿಯ ಶಿವನಾಡರ್ ಹಾಗೂ ಕುಟುಂಬ ಭಾರತದ ಶ್ರೀಮಂತಿಕೆ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಶಿವನಾಡರ್ ಹಾಗೂ ಕುಟುಂಬದ ಒಟ್ಟು ಆಸ್ತಿ 314,000 ಕೋಟಿ ರೂ. ಆಗಿದೆ.
ಸೀರಮ್ ಇನ್ಸ್‌ಸ್ಟಿಟ್ಯೂಟ್ ಇಂಡಿಯಾ ಸಂಸ್ಥೆಯ ಸೈರಸ್ ಪೂನಾವಲ 4ನೇ ಶ್ರೀಮಂತ ಭಾರತೀಯ ಎಂಬ ಖ್ಯಾತಿ ಗಳಿಸಿದ್ದಾರೆ. ಸನ್ ಫಾರ್ಮಾ ಕಂಪನಿಯ ಮುಖ್ಯಸ್ಥ ದಿಲೀಪ್ ಶಾಂಘ್ವಿ 5ನೇ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಾಪ್ 10ರ ಪಟ್ಟಿಯಲ್ಲಿ 21 ವರ್ಷದ ಝೆಪ್ಟೋ ಸಹ ಸಂಸ್ಥಾಪಕ ಕೈವಲ್ಯ ವೊಹ್ರಾ ಹಾಗೂ ಮತ್ತೊರ್ವ ಸಹ ಸಂಸ್ಥಾಪಕ 22 ವರ್ಷದ ಆದಿತ್ ಪಲಿಚಾ ಇದ್ದಾರೆ.
ಗೋಪಿಚಂದ್ ಹಿಂದುಜಾ ಕುಟುಂಬ, ರಾಧಾಕೃಷ್ಣ ದಮಾನಿ ಹಾಗೂ ಕುಟುಂಬವೂ ಈ ಬಾರಿ ಶ್ರೀಮಂತರ ಪಟ್ಟಿಯಲ್ಲಿ ಪಾಲು ಪಡೆದಿವೆ. 7,300 ಕೋಟಿ ರೂಪಾಯಿ ಆಸ್ತಿ ಮೂಲಕ ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಕೋಲ್ಕತಾ ನೈಟ್ ರೈಡರ್ಸ್ ಮಾಲೀಕರಾಗಿದ್ದಾರೆ. ಅದರಿಂದಲೂ ಆದಾಯ ಹೆಚ್ಚಾಗಿದೆ. ಅಲ್ಲದೇ, ಅವರ ರೆಡ್ ಚಿಲ್ಲಿಸ್ ಪ್ರೊಡಕ್ಷನ್ ಹೌಸ್ ಹೆಚ್ಚು ಆದಾಯ ತಂದು ಕೊಟ್ಟಿದೆ ಎನ್ನಲಾಗಿದೆ.