ಲಾಸ್ ಏಂಜಲೀಸ್ : ಡಿಸ್ನಿಯ ಜನಪ್ರಿಯ ಬ್ರಾಡ್‌ವೇ ಶೋ ‘ದಿ ಲಯನ್ ಕಿಂಗ್’ನಲ್ಲಿ (The Lion King) ‘ಯಂಗ್ ನಾಲಾ’ ಪಾತ್ರದ ಮೂಲಕ ಗಮನ ಸೆಳೆದಿದ್ದ ಪ್ರತಿಭಾವಂತ ನಟಿ ಇಮಾನಿ ಸ್ಮಿತ್ ಅವರು ಭೀಕರವಾಗಿ ಕೊಲೆಯಾಗಿದ್ದಾರೆ. ಈ ಹತ್ಯೆಗೆ ಸಂಬಂಧಿಸಿದಂತೆ ಅವರ ಪ್ರಿಯಕರ ಜೋರ್ಡಾನ್ ಡಿ. ಜಾಕ್ಸನ್-ಸ್ಮಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 21ರಂದು ನ್ಯೂಜೆರ್ಸಿಯ ಎಡಿಸನ್‌ನಲ್ಲಿ ಈ ಘಟನೆ ನಡೆದಿದೆ. 911 ಕರೆ ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ, ಇಮಾನಿ ಸ್ಮಿತ್ ಚಾಕು ಇರಿತದ ಗಾಯಗಳೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ರಾಬರ್ಟ್ ವುಡ್ ಜಾನ್ಸನ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮಿಡ್ಲ್‌ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.
ಪರಿಚಯಸ್ಥನಿಂದಲೇ ಕೃತ್ಯ |
ಇಮಾನಿ ಸ್ಮಿತ್ ಮತ್ತು ಆರೋಪಿ ಜೋರ್ಡಾನ್ ಪರಸ್ಪರ ಪರಿಚಿತರಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇಮಾನಿ ಅವರ ಸಂಬಂಧಿ ಕಿರಾ ಹೆಲ್ಪರ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಕಾರ, ಆರೋಪಿ ಜೋರ್ಡಾನ್ ಇಮಾನಿ ಅವರ ಪ್ರಿಯಕರನಾಗಿದ್ದ. ಹೀಗಾಗಿ ಇದೊಂದು ಪೂರ್ವಯೋಜಿತ ಕೃತ್ಯವಾಗಿದ್ದು, ಆಕಸ್ಮಿಕ ದಾಳಿಯಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ, ಮಗುವಿನ ಯೋಗಕ್ಷೇಮಕ್ಕೆ ಅಪಾಯ ತಂದೊಡ್ಡಿರುವುದು ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.
ಮೂರು ವರ್ಷದ ಮಗು ಅನಾಥ
“ಇಮಾನಿ ಅವರು ಅದ್ಭುತ ಪ್ರತಿಭೆಯಾಗಿದ್ದರು. ‘ಲಯನ್ ಕಿಂಗ್’ನಲ್ಲಿ ಯಂಗ್ ನಾಲಾ ಪಾತ್ರ ಮಾಡುವ ಮೂಲಕ ಅವರು ಜಗತ್ತಿಗೆ ಸಂತೋಷವನ್ನು ಹಂಚಿದ್ದರು. ಅವರಿಗಿನ್ನೂ ಸಾಕಷ್ಟು ಭವಿಷ್ಯವಿತ್ತು,” ಎಂದು ಅವರ ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಇಮಾನಿ ಸ್ಮಿತ್ ಅವರು ಮೂರು ವರ್ಷದ ಗಂಡು ಮಗುವನ್ನು ಅಗಲಿದ್ದಾರೆ. ಮೃತ ನಟಿಯ ಪೋಷಕರಿಗೆ ಆರ್ಥಿಕ ನೆರವು ನೀಡಲು ‘ಗೋ ಫಂಡ್ ಮೀ’ (GoFundMe) ಮೂಲಕ ನಿಧಿ ಸಂಗ್ರಹಿಸಲಾಗುತ್ತಿದೆ.
ಇದನ್ನೂ ಓದಿ : ಬಿಹಾರದ ವಿಶ್ವದಾಖಲೆಯ ಆಟದ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ | ಇದು ‘ಆದರ್ಶ ಸ್ಪರ್ಧೆ’ ಅಲ್ಲ ಎಂದ ಸ್ಪಿನ್ನರ್



















