ಮಧುರೈ: “ಸಿಂಹ ಯಾವತ್ತಿದ್ದರೂ ಸಿಂಹವೇ…” ಹೀಗೆಂದು ಗುಡುಗಿರುವುದು ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್. ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಿ, ರಾಜ್ಯ ರಾಜಕೀಯದಲ್ಲಿ ಹವಾ ಎಬ್ಬಿಸಿರುವ ವಿಜಯ್ ಅವರು, 2026ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಡಿಎಂಕೆ ಅಥವಾ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದ್ದಾರೆ.
ಮಧುರೈನಲ್ಲಿ ಗುರುವಾರ ನಡೆದ ಪಕ್ಷದ ಬೃಹತ್ ಸಮಾವೇಶದಲ್ಲಿ ಕಿಕ್ಕಿರಿದು ನೆರೆದಿದ್ದ ಲಕ್ಷಾಂತರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂಟಿಯಾಗಿ ಚುನಾವಣೆ ಎದುರಿಸುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ತಮ್ಮ ಭಾಷಣದಲ್ಲಿ, ಬಿಜೆಪಿಯನ್ನು “ಸೈದ್ಧಾಂತಿಕ ಶತ್ರು” ಮತ್ತು ಆಡಳಿತಾರೂಢ ಡಿಎಂಕೆಯನ್ನು “ರಾಜಕೀಯ ಶತ್ರು” ಎಂದು ಕರೆದಿರುವ ವಿಜಯ್, “ಯಾರಿಗೂ ಹೆದರುವ ಅಥವಾ ಭೂಗತ ವ್ಯವಹಾರ ನಡೆಸುವ ಪಕ್ಷ ನಮ್ಮದಲ್ಲ. ಇಡೀ ತಮಿಳುನಾಡಿನ ಶಕ್ತಿ ನಮ್ಮೊಂದಿಗಿದೆ. ಫ್ಯಾಸಿಸ್ಟ್ ಬಿಜೆಪಿ ಮತ್ತು ವಿಷಕಾರಿ ಡಿಎಂಕೆ ವಿರುದ್ಧ ನಾವು ಹೋರಾಡೋಣ,” ಎಂದು ಕರೆ ನೀಡಿದರು.
“ಯಾವುದೇ ಗುಲಾಮಗಿರಿ ಮೈತ್ರಿಗೆ ಸೇರುವ ಅವಶ್ಯಕತೆ ನನಗಿಲ್ಲ. ನಮ್ಮ ಮೈತ್ರಿ ಸ್ವಾರ್ಥದ ಮೈತ್ರಿಯಾಗಿರುವುದಿಲ್ಲ, ಅದು ಸ್ವಾಭಿಮಾನದ ಮೈತ್ರಿಯಾಗಿರುತ್ತದೆ,” ಎಂದು ಘೋಷಿಸುತ್ತಿದ್ದಂತೆ ನೆರೆದಿದ್ದ ಜನರಿಂದ ಭಾರಿ ಚಪ್ಪಾಳೆ ವ್ಯಕ್ತವಾಯಿತು.
ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಗುರಿಯಾಗಿಸಿ ಮಾತನಾಡಿದ ಅವರು, “ನಮಗೆ ಬೇಕಾದ್ದನ್ನು ನೀವು ಮಾಡುತ್ತಿಲ್ಲ. ನೀವು ಆರೆಸ್ಸೆಸ್ ಜೊತೆ ಮೈತ್ರಿ ಮಾಡಿಕೊಂಡು ಓಲೈಕೆ ರಾಜಕಾರಣ ಮಾಡುತ್ತಿದ್ದೀರಿ. 2029ರವರೆಗೂ ನಿಮ್ಮ ಪ್ರಯಾಣ ಸುಗಮವಾಗಿರುತ್ತದೆ ಎಂದು ಭಾವಿಸಿದ್ದೀರಿ. ಆದರೆ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ- ತಾವರೆಯ ಎಲೆಯ ಮೇಲೆ ನೀರಿನ ಹನಿಗಳು ನಿಲ್ಲುವುದಿಲ್ಲ, ಹಾಗೆಯೇ ತಮಿಳರು ಬಿಜೆಪಿ ಜೊತೆ ನಿಲ್ಲುವುದಿಲ್ಲ,” ಎಂದರು. ಕಚ್ಚತೀವು ದ್ವೀಪವನ್ನು ಹಿಂತಿರುಗಿಸುವಂತೆ ಮತ್ತು ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆಯೂ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಇದೇ ವೇಳೆ, ಆಡಳಿತಾರೂಢ ಡಿಎಂಕೆ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ವಿಜಯ್, “ಸ್ಟಾಲಿನ್ ಅಂಕಲ್, ಯಾವ ಅಂಕಲ್? ಮಹಿಳೆಯರಿಗೆ 1,000 ರೂ. ನೀಡಿದರೆ ಸಾಕೇ? ಸಂಕಷ್ಟದಲ್ಲಿರುವ ಮಹಿಳೆಯರ ಅಳು ನಿಮಗೆ ಕೇಳಿಸುತ್ತಿಲ್ಲವೇ? ನೀವು ಮಹಿಳೆಯರಿಗೆ, ಪರಂದೂರು ವಿಮಾನ ನಿಲ್ದಾಣದ ರೈತರಿಗೆ, ಮೀನುಗಾರರಿಗೆ ಮೋಸ ಮಾಡುತ್ತಿದ್ದೀರಿ,” ಎಂದು ಟೀಕಿಸಿದರು.
ತಮ್ಮ ರಾಜಕೀಯ ಪ್ರವೇಶವನ್ನು ‘ಸಿಂಹ’ಕ್ಕೆ ಹೋಲಿಸಿದ ಅವರು, “ಕಾಡಿನಲ್ಲಿ ನರಿಗಳು ಬಹಳ ಇರುತ್ತವೆ, ಆದರೆ ಸಿಂಹ ಮಾತ್ರ ಒಂದೇ ಇರುತ್ತದೆ. ಅದು ಬೇಟೆಗಾಗಿಯೇ ಹೊರಬರುತ್ತದೆ. ಸಿಂಹ ಯಾವಾಗಲೂ ಸಿಂಹವೇ. ಇದು ನನ್ನ ಸ್ಪಷ್ಟ ಘೋಷಣೆ,” ಎಂದರು. 2026ರ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲಿ ತಾವೇ ಸ್ಪರ್ಧಿಸುವುದಾಗಿಯೂ ಹೇಳುವ ಮೂಲಕ, ತಮ್ಮ ಪಕ್ಷವು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆ ಎಂಬ ಸುಳಿವು ನೀಡಿದರು.
ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಬಂದ ಟೀಕೆಗಳನ್ನು ತಳ್ಳಿಹಾಕಿದ ಅವರು, “ನಾನು ಚಿತ್ರರಂಗದಲ್ಲಿ ಮಾರುಕಟ್ಟೆ ಕಳೆದುಕೊಂಡ ನಂತರ ರಾಜಕೀಯಕ್ಕೆ ಬಂದಿಲ್ಲ. ನಾನು ಜನರನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ, ಪೂಜಿಸುತ್ತೇನೆ. ಈಗ ರಾಜಕೀಯವೇ ನನ್ನ ವೃತ್ತಿ. ರಾಜಕೀಯ ನಾಯಕ ಪ್ರಾಮಾಣಿಕನಾಗಿದ್ದಾನೆಯೇ ಎಂಬುದು ಮುಖ್ಯವೇ ಹೊರತು, ಆತ ನಟನಾಗಿದ್ದನೇ ಎಂಬುದಲ್ಲ,” ಎಂದು ಭಾವನಾತ್ಮಕವಾಗಿ ನುಡಿದರು.