ಬಿಜೆಪಿಯಲ್ಲಿಯೇ ನಡೆಯುತ್ತಿರುವ ಬಣಗಳ ಜಗಳವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿಜಯೇಂದ್ರ ವಿರುದ್ಧ ರಣಕಹಳೆ ಊದಿರುವ ಬಸನಗೌಡ ಪಾಟೀಲ್ ಯತ್ನಾಳ್ ಆ್ಯಂಡ್ ಟೀಮ್ ದೆಹಲಿಯಲ್ಲಿ ಇನ್ನಿಲ್ಲದ ತಂತ್ರ ಹೆಣೆಯುತ್ತಿದೆ. ಅಷ್ಟೇ ಅಲ್ಲ, ಫೆಬ್ರವರಿ 10ರಂದು ದೆಹಲಿಯಲ್ಲಿಯೇ ಭಿನ್ನರು, ಅದರಲ್ಲೂ ಲಿಂಗಾಯತ ಸಮುದಾಯದ ಪ್ರಮುಖ ನಾಯಕರು ಸಭೆ ನಡೆಸಲು ಮುಂದಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊರಗಿಟ್ಟೇ ಫೆಬ್ರವರಿ 10ರಂದು ಲಿಂಗಾಯತ ಶಾಸಕರು ಹಾಗೂ ನಾಯಕರು ದೆಹಲಿಯಲ್ಲಿ ಸಭೆ ನಡೆಸಲು ಮುಂದಾಗಿದ್ದಾರೆ. ಫೆಬ್ರವರಿ 10ರಂದು ಕೇಂದ್ರ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಸರ್ಕಾರಿ ಕಚೇರಿ ಉದ್ಘಾಟನೆ ಕಾರ್ಯಕ್ರಮ ಇದೆ. ಇದರ ನೆಪದಲ್ಲೇ ಲಿಂಗಾಯತ ನಾಯಕರು ಗೌಪ್ಯ ಸಭೆಯ ಮೂಲಕ ರಣತಂತ್ರ ರೂಪಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿ.ಎಸ್.ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಪ್ರಮುಖ ನಾಯಕರು ನಿಜ. ಆದರೆ, ಅವರ ಹೊರತಾಗಿಯೂ ರಾಜ್ಯ ಬಿಜೆಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವು ನಾಯಕರಿದ್ದಾರೆ. ಹಾಗೆಯೇ, ಬಿಎಸ್ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಲಿಂಗಾಯತ ಸಮುದಾಯದ ಮುಖಂಡರೆಲ್ಲರೂ ಒಗ್ಗಟ್ಟಾಗಿದ್ದಾರೆ ಎಂಬ ಸಂದೇಶ ರವಾನಿಸಲು ಲಿಂಗಾಯತ ಸಮುದಾಯದ ನಾಯಕರು ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ಮನೆಯೊಂದು ನೂರಾರು ಬಾಗಿಲು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೊಬ್ಬ ನಾಯಕ, ದಿನಕ್ಕೊಂದು ಬಣಗಳನ್ನು ಸೃಷ್ಟಿಸುತ್ತಿರುವ ಕಾರಣ ಪಕ್ಷದ ಸಂಘಟನೆಯು ಹಳ್ಳ ಹಿಡಿದಿದೆ. ಪಕ್ಷದ ಆಂತರಿಕ ಕಿತ್ತಾಟವು ಜನರಿಗೂ ಬೇಸರ ತಂದಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರಕ್ಕೆ ಬರಲಿದೆ ಎಂಬ ಕುತೂಹಲ, ನಿರೀಕ್ಷೆ ಹೆಚ್ಚಾಗಿದೆ.