ಛತ್ತೀಸ್‌ಗಢ : ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ವಿದ್ಯುತ್ ಸ್ಥಾವರದಲ್ಲಿ ಸರ್ವಿಸ್ ಲಿಫ್ಟ್ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ದಬ್ರಾ ಪ್ರದೇಶದ ಉಚ್ಪಿಂಡಾ ಗ್ರಾಮದಲ್ಲಿರುವ ಆರ್.ಕೆ.ಎಂ ಪವರ್‌ಜೆನ್ ಪ್ರೈವೇಟ್ ಲಿಮಿಟೆಡ್‌ನ ವಿದ್ಯುತ್ ಸ್ಥಾವರದಲ್ಲಿ ಈ ಘಟನೆ ಸಂಭವಿಸಿದೆ.
ತಮ್ಮ ಶಿಫ್ಟ್ ಮುಗಿಸಿ 10 ಕಾರ್ಮಿಕರು ಲಿಫ್ಟ್‌ನಲ್ಲಿ 40 ಮೀಟರ್ ಎತ್ತರದಿಂದ ಇಳಿಯುತ್ತಿದ್ದಾಗ ದುರಂತ ಸಂಭವಿಸಿದೆ. ಅವಘಡ ಸಂಭವಿಸಿದೆ ಕೂಡಲೇ ಗಾಯಾಳುಗಳನ್ನು ರಾಹುಘಡದ ಜಿಂದಾಲ್ ಫೋರ್ಟಿಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ನೀಡುವ ವೇಳೆಯೇ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಆರು ಮಂದಿ ಕಾರ್ಮಿಕರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರ್.ಕೆ.ಎಂ ಪವರ್‌ಜೆನ್ ಪ್ರೈವೇಟ್ ಲಿಮಿಟೆಡ್‌ನಲ್ಲಿರುವ 2,000 ಕೆಜಿ ಲೋಡ್ ಸಾಮರ್ಥ್ಯದ ಲಿಫ್ಟ್ ಕೇವಲ ಕೆಲವು ದಿನಗಳ ಹಿಂದಷ್ಟೇ, ಅಂದರೆ ಸೆಪ್ಟೆಂಬರ್ 29ರಂದು ನಿರ್ವಹಣೆ ಮಾಡಲಾಗಿತ್ತು. ಸದ್ಯ ಈ ಘಟನೆಗೆ ಕಾರಣವೇನು, ಲಿಫ್ಟ್‌ನಲ್ಲಿದ್ದ ಲೋಪವೇನು ಎಂದು ತನಿಖೆ ನಡೆಯುತ್ತಿದೆ.