ನವದೆಹಲಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಫೆ. 1ರಂದು ಕಾರ್ಯಕ್ರಮ ನಡೆಯಲಿದ್ದು, ಸಚಿನ್ ಗೆ ಬಿಸಿಸಿಐ ಜೀವಮಾನ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲು ಮುಂದಾಗಿದೆ. ಸಚಿನ್ ತೆಂಡೂಲ್ಕರ್ 2013 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಸಚಿನ್ ಕ್ರೀಡಾ ಲೋಕದ ಮರೆಯದ ರತ್ನವಾಗಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ಸಚಿನ್ ಬ್ಯಾಟ್ ನಿಂದ ಸಾಕಷ್ಟು ದಾಖಲೆಗಳು ಮೂಡಿ ಬಂದಿವೆ. ಹೀಗಾಗಿ ಅವರು ಕೋಟ್ಯಾಂತರ ಅಭಿಮಾನಿ ಬಳಗ ಹೊಂದಿದ್ದಾರೆ.
ಮುಂಬೈನಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆಯಲ್ಲಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಿದೆ. ಕಳೆದ ವರ್ಷ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರವಿಶಾಸ್ತ್ರಿ ಮತ್ತು ಮಾಜಿ ಅನುಭವಿ ವಿಕೆಟ್‌ಕೀಪರ್ ಫಾರೂಕ್ ಇಂಜಿನಿಯರ್ ಕರ್ನಲ್ ಸಿಕೆ ನಾಯುಡು ಈ ಪ್ರಶಸ್ತಿ ಪಡೆದಿದ್ದರು.
ಸಚಿನ್ ತೆಂಡೂಲ್ಕರ್ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಭಾರತದ ಅತ್ಯುನ್ನತ ಗೌರವ ಭಾರತ ರತ್ನವನ್ನು ಕೂಡ ಅವರು ಪಡೆದಿದ್ದಾರೆ. ಅರ್ಜುನ್ ಪ್ರಶಸ್ತಿ, ಖೇಲ್ ರತ್ನ, ಪದ್ಮಶ್ರೀ, ಪದ್ಮವಿಭೂಷಣ ಮತ್ತು ಮಹಾರಾಷ್ಟ್ರ ಭೂಷಣ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಐಸಿಸಿ ಮತ್ತು ಬಿಸಿಸಿಐನಿಂದ ನೀಡುವ ಹಲವಾರು ಪ್ರಶಸ್ತಿಗಳನ್ನು ಕೂಡ ಸ್ವೀಕರಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ದೇಶದ ಪರ 1 ಟಿ20, 200 ಟೆಸ್ಟ್ ಮತ್ತು 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 15921 ರನ್, ಏಕದಿನದಲ್ಲಿ 18426 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.