ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ದೇಶದಲ್ಲೇ ವಿಶ್ವಾಸಾರ್ಹ ಹಾಗೂ ಬೃಹತ್ ವಿಮಾ ಸಂಸ್ಥೆಯಾಗಿದೆ. ಕೋಟ್ಯಂತರ ಜನರು ಇದರಲ್ಲಿ ವಿಮಾ ಮಾಡಿಸುತ್ತಾರೆ. ಅದರಲ್ಲೂ, ಇತ್ತೀಚೆಗೆ ಎಲ್ಐಸಿಯು ಹೊಸ ಹೊಸ ಯೋಜನೆಗಳ ಮೂಲಕ ಜನರ ಬಳಿ ಬರುತ್ತಿದೆ. ವಿಮೆ ಜತೆಗೆ ಉಳಿತಾಯ, ಹೂಡಿಕೆ, ಗಳಿಕೆಯ ದೃಷ್ಟಿಯಿಂದಲೂ ಯೋಜನೆ ರೂಪಿಸುತ್ತಿದೆ. ಇದೇ ರೀತಿ ಎಲ್ಐಸಿಯು ಜೀವನ್ ಆನಂದ್ ಎಂಬ ಯೋಜನೆಯನ್ನು ಪರಿಚಯಿಸಿದ್ದು, ದಿನಕ್ಕೆ ಕೇವಲ 45 ರೂಪಾಯಿ ಉಳಿಸಿದರೆ ಸಾಕು, 35 ವರ್ಷದಲ್ಲಿ ನಿಮಗೆ 25 ಲಕ್ಷ ರೂಪಾಯಿ ತಂದುಕೊಡುತ್ತದೆ.
ಹೌದು, ಎಲ್ಐಸಿಯ ಜೀವನ್ ಆನಂದ್ ಪಾಲಿಸಿಯಲ್ಲಿ, ಪ್ರತಿ ತಿಂಗಳು ಸುಮಾರು 1.358 ರೂಪಾಯಿಗಳನ್ನು (ಅಂದರೆ ಪ್ರತಿ ದಿನ 45 ರೂಪಾಯಿಯನ್ನು) ಪ್ರೀಮಿಯಂ ಆಗಿ ಪಾವತಿಸುವ ಮೂಲಕ 25 ಲಕ್ಷ ರೂಪಾಯಿ ಫಂಡ್ ರಚಿಸಬಹುದು. ಇದು ಸ್ವಲ್ಪ ದೀರ್ಘಾವಧಿ ಯೋಜನೆಯಾಗಿದೆ. ವರ್ಷಕ್ಕೆ ನೀವು ಪಾವತಿಸಬೇಕಾದ ಪ್ರೀಮಿಯಂ 16,296 ರೂಪಾಯಿ. 35 ವರ್ಷ ನೀವು ಉಳಿತಾಯ ಮಾಡುವ ಹಣದ ಮೊತ್ತ 5,70,360 ರೂಪಾಯಿ. ಆದರೆ, ಇದು 45 ಲಕ್ಷ ರೂಪಾಯಿ ಆಗಿ ಪರಿವರ್ತನೆ ಆಗುತ್ತದೆ.
ಎಲ್ಐಸಿ ಜೀವನ್ ಆನಂದ್ ಪಾಲಿಸಿಯಲ್ಲಿ 35 ವರ್ಷದ ಮೆಚ್ಯುರಿಟಿ ಅವಧಿ ಬಳಿಕ ಅದು ಪಾಲಿಸಿದಾರರಿಗೆ ಒದಗಿಸುವ ಮೊತ್ತದ ಪ್ರಕಾರ ಮೂಲ ವಿಮೆ ಮೊತ್ತ 5 ಲಕ್ಷ ರೂಪಾಯಿ. ಇನ್ನು ಪರಿಷ್ಕರಣೆ ಬೋನಸ್ ಎಂದು 8.60 ಲಕ್ಷ ರೂಪಾಯಿ ಮತ್ತು ಅಂತಿಮ ಬೋನಸ್ ಎಂದು 11.50 ಲಕ್ಷ ರೂಪಾಯಿಯನ್ನು ಒದಗಿಸುತ್ತದೆ. ಹೀಗೆ ಒಟ್ಟು 25,80,360 ರೂಪಾಯಿ ನೀಡುತ್ತದೆ.
ಇದಕ್ಕೆ ಪಾಲಿಸಿ ಗರಿಷ್ಠ 15 ವರ್ಷವಾದರೂ ಚಾಲ್ತಿಯಲ್ಲಿರಬೇಕು ಎಂಬ ನಿಯಮವಿದೆ. ಹಾಗೆಯೇ, ಯೋಜನೆ ಜಾರಿಯಲ್ಲಿರುವ ವೇಳೆ ಒಂದು ಲಕ್ಷ ರೂಪಾಯಿ ವಿಮಾ ಸುರಕ್ಷತೆಯೂ ಇರುತ್ತದೆ. ಪಾಲಿಸಿದಾರರು ಆಕಸ್ಮಿಕವಾಗಿ ಮೃತಪಟ್ಟರೆ, ಎಲ್ಐಸಿಯಿಂದ ಆರ್ಥಿಕ ನೆರವನ್ನೂ ನೀಡಲಾಗುತ್ತದೆ.
ಗಮನಿಸಿ: ಎಲ್ಐಸಿ ಯೋಜನೆ ಕುರಿತು ಮಾಹಿತಿ ದೃಷ್ಟಿಯಿಂದ ಮಾತ್ರ ಲೇಖನವನ್ನು ಪ್ರಕಟಿಸಲಾಗಿದೆ. ಇದು ನಾವು ಮಾಡುವ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ಪರಿಣತರನ್ನು ಸಂಪರ್ಕಿಸಿ.



















