ಬೆಂಗಳೂರು: ದೇಶದ ಸಾರ್ವಜನಿಕ ವಲಯದ ಜೀವ ವಿಮಾ ಕಂಪನಿ ಎಲ್ಐಸಿ (LIC) ಎರಡು ಹೊಸ ವಿಮಾ ಯೋಜನೆಗಳನ್ನು ಪರಿಚಯಿಸಿದೆ. ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ (ಪ್ಲಾನ್ 886) ಮತ್ತು ಬಿಮಾ ಕವಚ್ (887) ಎಂಬ ಎರಡು ಯೋಜನೆಗಳಿಗೆ ಚಾಲನೆ ನೀಡಿದೆ. ಪ್ರೊಟೆಕ್ಷನ್ ಪ್ಲಸ್ ಒಂದು ಉಳಿತಾಯ ಯೋಜನೆ (Savings Plan) ಆಗಿದ್ದರೆ, ಬಿಮಾ ಕವಚ್ ಅಪಾಯ ರಕ್ಷಣಾ ಯೋಜನೆ (Pure Risk Protection Plan) ಆಗಿದೆ. ಇವುಗಳ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
- ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ (ಪ್ಲಾನ್ 886)
ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಒಂದು ನಾನ್-ಪಾರ್ಟಿಸಿಪೇಟಿಂಗ್ (ಲಾಭಾಂಶ ರಹಿತ), ಲಿಂಕ್ಡ್ ಲೈಫ್ ಇನ್ಶೂರೆನ್ಸ್ ಪ್ಲಾನ್ (ಮಾರುಕಟ್ಟೆಗೆ ಸಂಬಂಧಿಸಿದೆ) ಆಗಿದೆ. ಇದರಲ್ಲಿ ವಿಮೆ ಮತ್ತು ಉಳಿತಾಯ ಎರಡೂ ಸೇರಿವೆ. ಪಾಲಿಸಿ ಅವಧಿಯ ಉದ್ದಕ್ಕೂ ಪಾಲಿಸಿದಾರರಿಗೆ ವಿಮಾ ರಕ್ಷಣೆ ಇರುತ್ತದೆ.
ಈ ಪ್ಲಾನ್ ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ 65 ವರ್ಷ ಇದೆ. ಪಾಲಿಸಿ ಮೆಚ್ಯೂರಿಟಿ ಆಗುವ ಅವಧಿ 10, 15, 20 ಮತ್ತು 25 ವರ್ಷ ಎಂಬ ನಾಲ್ಕು ಆಯ್ಕೆಗಳಿವೆ. 10 ವರ್ಷದ ಪಾಲಿಸಿಯಾದರೆ ನೀವು 5 ವರ್ಷ ಪ್ರೀಮಿಯಂ ಕಟ್ಟಬೇಕು. 15 ವರ್ಷದ ಟರ್ಮ್ ಆಗಿದ್ದರೆ ಪ್ರೀಮಿಯಂ ಪಾವತಿಸುವುದು 7 ವರ್ಷ ಮಾತ್ರ. 20 ವರ್ಷವಾದರೆ 10 ವರ್ಷ ಪ್ರೀಮಿಯಂ; 25 ವರ್ಷವಾದರೆ 15 ವರ್ಷ ಪ್ರೀಮಿಯಂ ಕಟ್ಟುವ ಆಯ್ಕೆ ಇರುತ್ತದೆ.
ಪಾಲಿಸಿದಾರರಿಗೆ ನೀಡುವ ಕನಿಷ್ಠ ಖಾತ್ರಿ ಹಣವು ಪ್ರೀಮಿಯಮ್ ಪಾವತಿ ಅವಧಿ ಮತ್ತು ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. 50 ವರ್ಷದೊಳಗಿನ ವಯಸ್ಸಿನಲ್ಲಿ ಪಾಲಿಸಿ ಪಡೆದಲ್ಲಿ ವಾರ್ಷಿಕ ಪ್ರೀಮಿಯಮ್ನ ಏಳು ಪಟ್ಟು ಹಣವು ಬೇಸಿಕ್ ಸಮ್ ಅಶೂರ್ಡ್ ಆಗಿರುತ್ತದೆ. ಅಂದರೆ, ಕನಿಷ್ಠ ಖಾತ್ರಿ ಹಣ. 50 ವರ್ಷ ಮೇಲ್ಪಟ್ಟ ವಯಸ್ಸಿನಲ್ಲಿ ಪಾಲಿಸಿ ಪಡೆದರೆ ವಾರ್ಷಿಕ ಪ್ರೀಮಿಯಮ್ನ ಐದು ಪಟ್ಟು ಹಣವು ಬೇಸಿಕ್ ಸಮ್ ಅಶೂರ್ಡ್ ಆಗಿರುತ್ತದೆ.
ಉದಾಹರಣೆಗೆ: 35 ವರ್ಷದ ರವೀಂದ್ರ ಎಂಬ ವ್ಯಕ್ತಿ 20 ವರ್ಷಗಳ ಪಾಲಿಸಿ ಅವಧಿಯನ್ನು ಆರಿಸಿಕೊಂಡಿದ್ದಾನೆ ಮತ್ತು 15 ವರ್ಷಗಳ ಪಾವತಿ ಅವಧಿಯನ್ನು ಆಯ್ಕೆಮಾಡಿದ್ದಾನೆ ಎಂದುಕೊಳ್ಳೋಣ. ವಾರ್ಷಿಕ ಪ್ರೀಮಿಯಂ ಆಗಿ 40,000 ರೂಪಾಯಿ ಪಾವತಿಸಿದರೆ, ಅವನ ಮೂಲ ವಿಮಾ ಮೊತ್ತವು 10 ಪಟ್ಟು ಇರುತ್ತದೆ. ಆತ ಬಾಂಡ್ ಫಂಡ್ ಅನ್ನು ಆಯ್ಕೆ ಮಾಡಿದರೆ, ಮೆಚ್ಯೂರಿಟಿ ಸಮಯದಲ್ಲಿ 4% ವಾರ್ಷಿಕ ಆದಾಯದೊಂದಿಗೆ ಆ ಮೊತ್ತ 7,81,306 ರೂ. ಆಗಿರುತ್ತದೆ. ಅದೇ 8% ಆದಾಯ ಬಂದರೆ, 13,20,333 ರೂ. ಸಿಗುತ್ತದೆ.
- ಎಲ್ಐಸಿ ಬಿಮಾ ಕವಚ್ (ಪ್ಲಾನ್ 887)
ಇದು ಸಂಪೂರ್ಣವಾಗಿ ನಾನ್-ಪಾರ್ಟಿಸಿಪೇಟಿಂಗ್, ನಾನ್-ಲಿಂಕ್ಡ್, ವೈಯಕ್ತಿಕ ಜೀವ ವಿಮಾ ಯೋಜನೆಯಾಗಿದೆ. ಇದು ಅಪಾಯ ರಕ್ಷಣಾ ಯೋಜನೆ (Pure Risk Protection Plan). ಯಾವುದೇ ಕುಟುಂಬದ ಮುಖ್ಯಸ್ಥರು ತಮ್ಮ ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡಲು ಈ ಪಾಲಿಸಿ ಸಹಾಯಕವಾಗಿದೆ. ಇದರಲ್ಲಿ ವಿಮಾ ಮೊತ್ತವನ್ನು (Sum Assured) ಸ್ಥಿರವಾಗಿ ಇರಿಸಬಹುದು ಅಥವಾ ಪ್ರತಿ ವರ್ಷ ಮೊತ್ತವನ್ನು ಹೆಚ್ಚಿಸುವ ಅವಕಾಶವೂ ಇದೆ.
ಈ ಪಾಲಿಸಿಯು ಕನಿಷ್ಠ 2 ಕೋಟಿ ರೂ. ವಿಮಾ ಭರವಸೆಯೊಂದಿಗೆ ಪ್ರಾರಂಭವಾಗುತ್ತದೆ. ನಂತರ 5 ಲಕ್ಷ ರೂ.ನಂತೆ ಎಷ್ಟಾದರೂ ಹೆಚ್ಚಿಸಬಹುದು. ಗರಿಷ್ಠ ಮೊತ್ತದ ಮೇಲೆ ಯಾವುದೇ ಮಿತಿ ಇಲ್ಲ.
ಪ್ರೀಮಿಯಂ ಅನ್ನು ಒಮ್ಮೆಯೇ ಪಾವತಿಸಬಹುದು ಅಥವಾ 5, 10, 15 ವರ್ಷಗಳ ಪ್ರೀಮಿಯಂ ಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು. ಇಲ್ಲವೇ ನಿಯಮಿತ ಪಾವತಿ ಆಯ್ಕೆ ಮಾಡಬಹುದು. ಪ್ರೀಮಿಯಂ ಪಾವತಿ ಅವಧಿಯನ್ನು ಆಧರಿಸಿ ಪ್ರೀಮಿಯಂ ಇರುತ್ತದೆ.
ಉದಾಹರಣೆಗೆ: 30 ವರ್ಷದ ವ್ಯಕ್ತಿ 20 ವರ್ಷಗಳ ಅವಧಿಗೆ 2 ಕೋಟಿ ರೂ. ವಿಮಾ ಮೊತ್ತಕ್ಕೆ ಪಾಲಿಸಿಯ ಅಡಿಯಲ್ಲಿ ಆಯ್ಕೆ-1 (ಲೆವೆಲ್ ಸಮ್ ಅಶ್ಯೂರ್ಡ್) ಅನ್ನು ಆರಿಸಿಕೊಂಡರೆ, ನಿಯಮಿತವಾಗಿ ವರ್ಷಕ್ಕೆ 19,000 ರೂ. ಪಾವತಿಸಬೇಕಾಗುತ್ತದೆ. ಅದೇ 15 ವರ್ಷಗಳ ಪ್ರೀಮಿಯಂ ಪಾವತಿ ಅವಧಿಯನ್ನು ಆರಿಸಿಕೊಂಡರೆ, ವರ್ಷಕ್ಕೆ 22,200 ರೂ. ಪಾವತಿಸಬೇಕು. ಕೇವಲ 10 ವರ್ಷಗಳ ಅವಧಿಗೆ ಪಾವತಿಸಲು ಬಯಸಿದರೆ 28,800 ರೂ., 5 ವರ್ಷಗಳಿಗೆ 50,000 ರೂ. ಮತ್ತು ಏಕ ಪ್ರೀಮಿಯಂ ಆದರೆ 2.04 ಲಕ್ಷ ರೂ. ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಬಿ.ಎಡ್, ಡಿ.ಎಡ್ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 25 ಸಾವಿರ ರೂ. : ಅರ್ಜಿ ಸಲ್ಲಿಸುವುದು ಹೇಗೆ?



















