ಹಾಸನ: ಕಾಂಗ್ರೆಸ್ ರಾಜ್ಯದ ರೈತರಿಗೆ ಸಾಲ ಮನ್ನಾದ ಗ್ಯಾರಂಟಿ ನೀಡಲಿ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 5 ಗ್ಯಾರಂಟಿ ಜಾರಿಗೆ ತಂದಿದ್ದೇವೆಂದು ಕಾಂಗ್ರೆಸ್ ಸರ್ಕಾರ ಅಹಂಕಾರದಿಂದ ಹೇಳುತ್ತಿದೆ. ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೈತರ ಸಾಲ ಮನ್ನಾ ಮಾಡಲಿ. ಮನ್ನಾ ಮಾಡುವ ಗ್ಯಾರಂಟಿ ನೀಡಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹತ್ತು ಸಮಾವೇಶ ಮಾಡಿ ಹೇಳಿಕೆ ನೀಡಿದರೂ ಏನೂ ಆಗಲ್ಲ. ಅವರ ಮಾತನಿಂದ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಇರುವುದು ನಕಲಿ ಕಾಂಗ್ರೆಸ್ ಪಕ್ಷ ಮಾತ್ರ. ಹೀಗಾಗಿ ಈ ನಕಲಿ ಪಕ್ಷಕ್ಕೆ ನಾವು ಹೆದರುವುದಿಲ್ಲ ಎಂದಿದ್ದಾರೆ.
ಈ ಜಿಲ್ಲೆಯ ಜನರು ದೇವೇಗೌಡರಿಗೆ, ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಅವರ ಋಣ ನಮ್ಮ ಮೇಲೆ ಇದೆ. ಅದನ್ನು ತೀರಿಸುತ್ತೇವೆ. ನನ್ನ ಕೈಲಾದ ಕೆಲಸವನ್ನು ಈ ಜಿಲ್ಲೆಗೆ ಮಾಡುತ್ತೇನೆ. ವಿರೋಧಿಗಳು ನೂರಾರು ಸಮಾವೇಶ ಮಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.