ನವದೆಹಲಿ : ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಹಾಗೂ ಪ್ರಮುಖ ಧಾರ್ಮಿಕ ಸ್ಥಳಗಳ ಮೇಲೆ ಭೀಕರ ಬಾಂಬ್ ದಾಳಿ ನಡೆಸಲು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಉಗ್ರಗಾಮಿ ಸಂಘಟನೆ ಸಂಚು ರೂಪಿಸಿದೆ ಎಂದು ಭದ್ರತಾ ಸಂಸ್ಥೆಗಳ ಮೂಲಗಳು ಎಚ್ಚರಿಸಿವೆ. ದೆಹಲಿಯ ಚಾಂದಿನಿ ಚೌಕ್‌ನಲ್ಲಿರುವ ಪ್ರಸಿದ್ಧ ದೇವಾಲಯ ಸೇರಿದಂತೆ ದೇಶದ ಹಲವು ಜನನಿಬಿಡ ಪ್ರದೇಶಗಳಲ್ಲಿ ಐಇಡಿ (IED) ಸ್ಫೋಟ ನಡೆಸಲು ಉಗ್ರರು ಯೋಜನೆ ಹಾಕಿಕೊಂಡಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಪಾಕಿಸ್ತಾನದ ಮಸೀದಿ ಸ್ಫೋಟಕ್ಕೆ ಸೇಡಿನ ಕಿಚ್ಚು
ಫೆಬ್ರವರಿ 6ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನ ಮಸೀದಿಯೊಂದರಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಲು ಲಷ್ಕರ್ ಸಂಚು ಹೂಡಿದೆ ಎನ್ನಲಾಗಿದೆ. ಇಸ್ಲಾಮಾಬಾದ್ ಸ್ಫೋಟದಲ್ಲಿ 31 ಜನರು ಸಾವನ್ನಪ್ಪಿದ್ದು, 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (IS) ಉಗ್ರರು ಹೊತ್ತುಕೊಂಡಿದ್ದರೂ, ಲಷ್ಕರ್ ಸಂಘಟನೆಯು ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಮೂಲಕ ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ನವೆಂಬರ್ 10, 2025 ರಂದು ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದ ಭೀಕರ ಕಾರು ಸ್ಫೋಟದ ನೆನಪು ಮಾಸುವ ಮುನ್ನವೇ ಈ ಹೊಸ ಎಚ್ಚರಿಕೆ ಬಂದಿದೆ. ಅಂದು ನಡೆದ ಸ್ಫೋಟದಲ್ಲಿ 12 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಉಮರ್ ಮೊಹಮ್ಮದ್ ಎಂಬಾತನೇ ಕಾರು ಸ್ಫೋಟಿಸಿ ಆತ್ಮಾಹುತಿ ಮಾಡಿಕೊಂಡಿದ್ದ ಎಂಬುದು ಡಿಎನ್ಎ ಪರೀಕ್ಷೆಯಿಂದ ಸಾಬೀತಾಗಿತ್ತು. ಆ ಘಟನೆ ವೇಳೆ ಹರ್ಯಾಣದ ಫರೀದಾಬಾದ್‌ನಲ್ಲಿ ಸುಮಾರು 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಕೆಂಪುಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಡಾ. ಮುಜಮ್ಮಿಲ್ ಶಕೀಲ್ ಮತ್ತು ಡಾ. ಅದಿಲ್ ರಾಥರ್ ಹೀಗೆ ಹಲವು ವೈದ್ಯರು ಸೇರಿ ಏಳು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ನ್ಯಾಯಾಂಗ ಬಂಧನವನ್ನು ಮಾರ್ಚ್ 13ರವರೆಗೆ ವಿಸ್ತರಿಸಲಾಗಿದ್ದು, ಈ ಇಡೀ ಜಾಲದ ಸಂಚು ಕುರಿತ ತನಿಖೆಯನ್ನು ಪೂರ್ಣಗೊಳಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ದೆಹಲಿ ನ್ಯಾಯಾಲಯವು 45 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ. ಸದ್ಯ ಲಷ್ಕರ್‌ನ ಹೊಸ ಸಂಚಿನ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳು ತೀವ್ರ ನಿಗಾ ವಹಿಸಿವೆ.
ಇದನ್ನೂ ಓದಿ : “ಬರಿ ನಮೀಬಿಯಾ ವಿರುದ್ಧ ಆಡಿದರೆ ಸಾಲದು” | ಶದಬ್ ಖಾನ್‌ಗೆ ಶಾಹಿದ್ ಅಫ್ರಿದಿ ಖಡಕ್ ವಾರ್ನಿಂಗ್!



















