ದಕ್ಷಿಣ ಕನ್ನಡ: ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕಮಾಸದ ವೇಳೆ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನ.15 ರಿಂದ 19 ರವರೆಗೆ ನಡೆಯಲಿವೆ.
ನ. 18ರಂದು ಮಂಗಳವಾರ ಸಂಜೆ 5ರಿಂದ ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನ ನಡೆಯಲಿದೆ. ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯಾಭಿವೃದ್ಧಿ ಇಲಾಖೆ ಸಚಿವ ಡಾ. ಬಿ.ಎಂ. ಪಾಟೀಲ್ ಸರ್ವಧರ್ಮ ಸಮ್ಮೇಳನದ 93ನೇ ಅಧೀವೇಶನ ಉದ್ಘಾಟಿಸಲಿದ್ದಾರೆ.
ಹರಿಹರಪುರದ ಪೂಜ್ಯ ಸ್ವಯಂಪ್ರಕಾಶ್ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಪ್ರಜಾವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕ ಎ. ಸೂರ್ಯಪ್ರಕಾಶ್ ಪಂಡಿತ್ ಮತ್ತು ಖ್ಯಾತ ಅಂಕಣಕಾರ ತನ್ವೀರ್ ಅಹಮ್ಮದ್ ಉಲ್ಲಾ ಉಪನ್ಯಾಸ ನೀಡುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂಟೆ 8.30 ರಿಂದ ಚೆನೈನ ಶ್ರೀದೇವಿ ನೃತ್ಯಾಲಯದ ಕಲಾವಿದರಿಂದ ವಿದುಷಿ ಡಾ. ಶೀಲಾ ಉನ್ನಿಕೃಷ್ಣನ್ ನಿರ್ದೇಶನದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನವಿದೆ.
ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಲಿದೆ. ನ. 19 ರಂದು ಬುಧವಾರ ಸಂಜೆ 5ಗಂಟೆಗೆ ಸಾಹಿತ್ಯ ಸಮ್ಮೇಳನದ 93ನೇ ಅಧೀವೇಶನವನ್ನು ಹಿರಿಯ ಸಾಹಿತಿ ಮತ್ತು ಅಂಕಣಕಾರ ಪ್ರೊ. ಪ್ರೇಮಶೇಖರ ಉದ್ಘಾಟಿಸುವರು. “ವಿಶ್ವವಾಣಿ” ಪತ್ರಿಕೆಯ ಮುಖ್ಯ ಸಂಪಾದಕ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸುವರು.
ಖ್ಯಾತ ಲೇಖಕಿ ಶಾಂತಾ ನಾಗಮಂಗಲ, ವಿವೇಕಹಂಸ ಮಾಸಪತ್ರಿಕೆಯ ಸಂಪಾದಕ ಡಾ. ರಘು ವಿ. ಮತ್ತು ಧಾರವಾಡದ ಖ್ಯಾತ ಸಾಹಿತಿ ಡಾ. ಬಿ.ಎಂ. ಶರಭೇಂದ್ರ ಸ್ವಾಮಿ ಉಪನ್ಯಾಸ ನೀಡುವರು. ಸಾಂಸ್ಕೃತಿಕ ಕಾರ್ಯಕ್ರಮದ ನಿಮಿತ್ತ ರಾತ್ರಿ ಗಂಟೆ 8.30 ರಿಂದ ಬೆಂಗಳೂರಿನ ರಾಹುಲ್ ವೆಲ್ಲಾಲ್ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 9.45 ರಿಂದ “ದಕ್ಷಯಜ್ಞ” ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ರಾತ್ರಿ 12 ಗಂಟೆ ಬಳಿಕ ಗೌರಿಮಾರುಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ನಡೆಯಲಿದೆ. ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಆಗಮಿಸಲಿದ್ದು, ನ. 20 ರ ಗುರುವಾರ ಬೆಳಗಿನ ಜಾವ ಲಕ್ಷದೀಪೋತ್ಸವ ಸಮಾಪನಗೊಳ್ಳುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಚೆಂಡೆ, ಕೊಂಬು, ಕಹಳೆ, ವಾಲಗ, ನಾಗಸ್ವರ ಮೊದಲಾದ ಸಾವಿರಾರು ಕಲಾವಿದರು ರಾತ್ರಿ ಇಡೀ ಕಲಾಸೇವೆ ಮಾಡುವರು. ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ಕೆ.ಎಸ್.ಆರ್.ಟಿ.ಸಿ. ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ
ಇದನ್ನೂ ಓದಿ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಆರೋಗ್ಯದಲ್ಲಿ ಏರುಪೇರು | ಆಸ್ಪತ್ರೆಗೆ ದಾಖಲು



















