ಚಿಕ್ಕಬಳ್ಳಾಪುರ: ರಸ್ತೆಯಲ್ಲಿ ಮಹಿಳಾ ಟೆಕ್ಕಿಯೊಬ್ಬಳು ಅಡ್ಡಾದಿಡ್ಡಿ ಸ್ಕೂಟಿ ಚಾಲನೆ ಮಾಡುತ್ತಿದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಬೈಕ್ ಸವಾರರಿಗೆ ಚಾಕು ಇರಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ತಮಿಳುನಾಡು ಮೂಲದ ರವಿಕಾ ಬೈಕ್ ಸವಾರರಿಗೆ ಚಾಕು ಇರಿದ ಮಹಿಳಾ ಟೆಕ್ಕಿ. ತನ್ನ ತಮಿಳುನಾಡು ನೊಂದಣಿಯ ಸ್ಕೂಟಿ ಏರಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಕಡೆಗೆ ಬಂದು ವಾಪಾಸ್ ಬೆಂಗಳೂರಿನತ್ತ ತೆರಳುತ್ತಿದ್ದಳು. ಈ ವೇಳೆ ಬೆಂಗಳೂರು ಹೈದರಾಬಾದ್ ಹೈವೆಯಲ್ಲಿ ಅಡ್ಡಾ ದಿಡ್ಡಿಯಾಗಿ ಸ್ಕೂಟಿ ಒಡಿಸುತ್ತಾ ಹಿಂದೆ ಬರುತ್ತಿದ್ದ ಸವಾರರಿಗೆ ಇರುಸು ಮುರುಸು ಉಂಟು ಮಾಡಿದ್ದಳು. ಹೀಗಾಗಿ ವಾಪಸಂದ್ರೆ ಸೇತುವೆ ಕೆಳಗಡೆ ಸ್ಕೂಟಿ ನಿಲ್ಲಿಸಿ ನಿಂತಿದ್ದ ಈಕೆಯನ್ನು ಹಿಂಬದಿ ಬರುತ್ತಿದ್ದ ಬೈಕ್ ಸವಾರರಾದ ನಿಖಿಲ್ ಹಾಗೂ ನರಸಿಂಹಮೂರ್ತಿ ಪ್ರಶ್ನೆ ಮಾಡಿದ್ದಾರೆ
ಯಾಕಮ್ಮ ಗಾಡಿ ಅಡ್ಡಾದಿಡ್ಡಿ ಒಡಿಸ್ತಿದ್ದೀಯಾ? ಎಂದಿದ್ದೇ ತಡ ಆಕೆ ಬಳಿ ಇದ್ದ ಫೋಲ್ಡೆಡ್ ಚಾಕುವಿನಿಂದ ಆಟ್ಯಾಕ್ ಮಾಡಿದ್ದಾಳೆ. ಇದರಿಂದ ಬೈಕ್ ಸವಾರ ನಿಖಿಲ್ ಕೈಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ, ಹಿಂಬದಿ ಸವಾರ ನರಸಿಂಹಮೂರ್ತಿಗೆ ಸಣ್ಣಪುಟ್ಟ ಗಾಯವಾಗಿದೆ. ಆಕೆ ಚಾಕುವಿನಿಂದ ಆಟ್ಯಾಕ್ ಮಾಡುತ್ತಿದ್ದಂತೆ ಯುವಕ ನಿಖಿಲ್ ಸಹ ತಿರುಗಿ ಆಕೆ ಮೇಲೆ ಹಲ್ಲೆ ಮಾಡಿದ್ದಾನೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಹೋಟೆಲ್‌ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆಯುತ್ತಿದ್ದಂತೆ ಇತರೆ ವಾಹನ ಸವಾರರು, ಸ್ಥಳೀಯರು ಜಮಾಯಿಸಿ ಯುವತಿಯನ್ನು ರೆಡ್ ಹ್ಯಾಂಡಾಗಿ ಹಿಡಿದುಕೊಂಡಿದ್ದಾರೆ. ಬಳಿಕ ಪೊಲೀಸರನ್ನು ಕರೆಸಿ ಆಕೆಯನ್ನು ಒಪ್ಪಿಸಿದ್ದಾರೆ.
ಸದ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಯುವಕ ನಿಖಿಲ್ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ರವಿಕಾಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಯುವಕರು ನನ್ನನ್ನ ಫಾಲೋ ಮಾಡಿ ಅನುಚಿತವಾಗಿ ವರ್ತನೆ ಮಾಡಿದರು ಅದಕ್ಕೆ ನಾನು ಚಾಕುವಿನಿಂದ ಆಟ್ಯಾಕ್ ಮಾಡಿದೆ ಎಂದು ಆಕೆ ಆರೋಪಿಸಿದ್ದಾಳೆ. ಆಕೆ ಪೊಲೀಸ್ ಠಾಣೆಯಲ್ಲೂ ಪೊಲೀಸರಿಗೆ ಸಹಕರಿಸದೆ ಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸೌದಿ ಅರೇಬಿಯಾ ಬಸ್ ದುರಂತದಲ್ಲಿ ಬೀದರ್ ಮಹಿಳೆ ಸಾವು | ಪಾರ್ಥಿವ ಶರೀರ ತರಿಸಲು ಸರ್ಕಾರಕ್ಕೆ ಕುಟುಂಬಸ್ಥರ ಮನವಿ!



















