ಕುಂದಾಪುರ: ಕರ್ನಾಟಕ ನೀರಾವರಿ ನಿಗಮದಿಂದ ನಿರ್ವಹಿಸಲ್ಪಡುತ್ತಿರುವ, ವರಾಹಿ ನೀರಾವರಿ ಯೋಜನೆಯ ಮೂಲಕ ನಿರ್ಮಾಗೊಂಡು ರೈತರಿಗೆ ವರವಾಗಿರುವ ಸೌಕೂರು ಏತ ನೀರಾವರಿ ಯೋಜನೆಗೆ ನೀರು ಹಾಯಿಸುವ ವಿದ್ಯುತ್ ಚಾಲಿತ ಪಂಪುಸೆಟ್‌ಗಳ ವಿದ್ಯುತ್ ಬಿಲ್ ವರಾಹಿ ನೀರಾವರಿ ಇಲಾಖೆ ಬಾಕಿ ಇಟ್ಟಿರುವ ಕಾರಣ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ಈ ಪ್ರಕರಣ ಶಾಶ್ವತ ಪರಿಹಾರಗೊಳ್ಳಲು ಸರ್ಕಾರ ಈ ಬಹು ಬೇಡಿಕೆಯ ಯೋಜನೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಬೇಕೆಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹ ಪಡಿಸಿದ್ದಾರೆ.
ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿರುವಾಗ ಶಕ್ತಿ ಯೋಜನೆಯ ಮೂಲಕ ರೈತರ ಹತ್ತು ಅಶ್ವಶಕ್ತಿ ತನಕದ ಕೃಷಿ ಪಂಪುಸೆಟ್ ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿದ ಯೋಜನೆ ಇಂದಿಗೂ ರಾಜ್ಯದ ರೈತಾಪಿ ಬಂಧುಗಳಿಗೆ ವರವಾಗಿದೆ.
ಇಂದಿನ ಸೌಕೂರು ಏತ ನೀರಾವರಿ ಯೋಜನೆ ಸಮಸ್ಯೆ ಶಾಶ್ವತ ಪರಿಹಾರವಾಗಬೇಕಾದರೆ ಸರ್ಕಾರ ಮೆಸ್ಕಾಂ ಇಲಾಖೆ ಮೂಲಕ ಈ ಯೋಜನೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಬೇಕು. ಇಲ್ಲದೆ ಇದ್ದರೆ ಪ್ರತೀ ವರ್ಷ ಈ ಸಮಸ್ಯೆ ಏರ್ಪಡುತ್ತದೆ ಮತ್ತೆ ಜನಪ್ರತಿನಿದಿನಗಳ ಹೇಳಿಕೆ, ಮನವಿ, ರೈತರ ಹೋರಾಟಕ್ಕೆ ಕೊನೆ ಎನ್ನುವುದು ಇರುವುದಿಲ್ಲ. ಆದುದರಿಂದ ಸಂಬಂಧಪಟ್ಟ ಇಲಾಖಾ ಸಚಿವರು, ಅಧಿಕಾರಿಗಳು ಮತ್ತು ಶಾಸಕರು ಈ ಬಗ್ಗೆ ಕ್ರಮವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮೊಟ್ಟೆಗಳಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ? ಎಚ್ಚೆತ್ತ ಆರೋಗ್ಯ ಇಲಾಖೆ, ಮೊಟ್ಟೆ ಟೆಸ್ಟ್‌ಗೆ ಸೂಚನೆ!



















