ಮುಂಬೈ: ಹಾಸ್ಯ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ‘ದ್ರೋಹಿ’ ಎಂದು ಕರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಸೋಮವಾರ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಏಪ್ರಿಲ್ 5ರಂದೇ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮಂಗಳವಾರ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ವಿರುದ್ಧದ ಪೊಲೀಸರ ಕ್ರಮವು ಸಂವಿಧಾನವು ತಮಗೆ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕು, ಯಾವುದೇ ವೃತ್ತಿ ಮತ್ತು ವ್ಯವಹಾರವನ್ನು ಮಾಡುವ ಹಕ್ಕು ಹಾಗೂ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಅಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕಾಮ್ರಾ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಮುಂಬೈ ಪೊಲೀಸರು ಸತತ ಮೂರು ಸಮನ್ಸ್ ನೀಡಿದ್ದರೂ ಕಾಮ್ರಾ ಇನ್ನೂ ವಿಚಾರಣೆಗೆ ಹಾಜರಾಗಿಲ್ಲ. ಬದಲಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ತಮ್ಮ ಹೇಳಿಕೆಗಳನ್ನು ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಅವರು ಹೈಕೋರ್ಟ್ ಮೊರೆಹೋಗಿದ್ದಾರೆ.
ಶಿವಸೇನೆ ಶಾಸಕ ಮುರ್ಜಿ ಪಟೇಲ್ ನೀಡಿದ ದೂರಿನ ಆಧಾರದ ಮೇಲೆ ಕಮ್ರಾ ವಿರುದ್ಧ ಮಾರ್ಚ್ 24 ರಂದು ಪ್ರಕರಣ ದಾಖಲಾಗಿತ್ತು. ಮುಂಬೈನ ಯುನಿಕಾಂಟಿನೆಂಟಲ್ ಹೋಟೆಲ್‌ನ ಹ್ಯಾಬಿಟಾ ಸ್ಟುಡಿಯೋದಲ್ಲಿ ನಡೆದ ಪ್ರದರ್ಶನದ ವೇಳೆ, ಕುನಾಲ್ ಕಾಮ್ರಾ ಅವರು ಡಿಸಿಎಂ ಶಿಂಧೆ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಮಾನಹಾನಿ ಮಾಡಿದ್ದಾರೆ ಎಂದು ಶಿವಸೇನೆ ನಾಯಕ ದೂರಿನಲ್ಲಿ ಆರೋಪಿಸಿದ್ದಾರೆ.
ಕುನಾಲ್ ಕಾಮ್ರಾ ನಿರೀಕ್ಷಣಾ ಜಾಮೀನು
ಮುಂಬೈನಲ್ಲಿ ದಾಖಲಾದ ಎಫ್ಐಆರ್‌ಗೆ ಸಂಬಂಧಿಸಿದಂತೆ ಮಾರ್ಚ್‌ನಲ್ಲಿ ಮದ್ರಾಸ್ ಹೈಕೋರ್ಟ್ ಕಾಮ್ರಾಗೆ ಏಪ್ರಿಲ್ 7 ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ತಾನು ತಮಿಳುನಾಡಿನ ಖಾಯಂ ನಿವಾಸಿಯಾಗಿದ್ದು, ಮಹಾರಾಷ್ಟ್ರಕ್ಕೆ ಪ್ರಯಾಣಿಸಿದರೆ ತಮ್ಮನ್ನು ಬಂಧಿಸಬಹುದು ಅಥವಾ ತಮ್ಮ ಮೇಲೆ ದಾಳಿಯಾಗಬಹುದು ಎಂಬ ಭೀತಿಯಿದೆ ಎಂದು ಕಾಮ್ರಾ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.