ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭ(Maha Kumbh) ಮೇಳದ ವೇಳೆ ಇಡೀ ಜಗತ್ತು ಭಾರತದ ಭವ್ಯತೆಗೆ ಸಾಕ್ಷಿಯಾಗಿದ್ದು, ಕುಂಭಮೇಳದ ಯಶಸ್ಸು ‘ಸಬ್ಕಾ ಪ್ರಯಾಸ್'(ಸರ್ವರ ಪ್ರಯತ್ನ)ಗೆ ಪ್ರಮುಖ ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಲೋಕಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಮಹಾ ಕುಂಭ ಮೇಳವು “ಉದಯಿಸುತ್ತಿರುವ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಬಣ್ಣಿಸಿದ್ದಾರೆ.
“ಮಹಾ ಕುಂಭದ ಯಶಸ್ಸಿನಲ್ಲಿ ಹಲವಾರು ಜನರ ಪಾತ್ರವಿದೆ. ಸರ್ಕಾರ ಮತ್ತು ಸಮಾಜದ ಎಲ್ಲಾ ಕರ್ಮಯೋಗಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
144 ವರ್ಷಗಳ ನಂತರ ನಡೆದ ವಿಶ್ವದ ಅತಿದೊಡ್ಡ ಧಾರ್ಮಿಕ ಸಮ್ಮೇಳನದಲ್ಲಿ ಒಂದಾದ 45 ದಿನಗಳ ಮಹಾ ಕುಂಭ ಮೇಳೆವು ಜನವರಿ 13ರಂದು ಆರಂಭವಾಗಿ ಫೆಬ್ರವರಿ 26 ರಂದು ಮುಕ್ತಾಯಗೊಂಡಿತು. 66 ಕೋಟಿಗೂ ಹೆಚ್ಚು ಜನರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಪ್ರಧಾನಿ ಮೋದಿ ಅವರೂ ಫೆಬ್ರವರಿ 5 ರಂದು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಗಂಗಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದರು.
‘ವೈವಿಧ್ಯತೆಯಲ್ಲಿ ಏಕತೆ ನಮ್ಮ ವಿಶೇಷತೆ’
ಜಾಗತಿಕ ಸವಾಲುಗಳ ನಡುವೆ, ಮಧ್ಯಪ್ರಾಚ್ಯ ಮತ್ತು ಯುರೋಪಿನ ಯುದ್ಧಗಳು ರಾಷ್ಟ್ರಗಳ ನಡುವೆ ಕಂದಕವನ್ನು ಸೃಷ್ಟಿಸುತ್ತಿವೆ. ಆದರೆ ಇದರ ನಡುವೆಯೂ ಭಾರತದಲ್ಲಿ ಶಾಂತಿ ನೆಲೆಸಿದ್ದು, “ಏಕತೆಯ ಪ್ರದರ್ಶನವು ನಮ್ಮ ದೊಡ್ಡ ಶಕ್ತಿಯಾಗಿದೆ” ಎಂದು ಪ್ರಧಾನಿ ಒತ್ತಿ ಹೇಳಿದರು.
“ಇಂದು, ಇಡೀ ಜಗತ್ತು ಸವಾಲಿನ ಸಮಯವನ್ನು ಎದುರಿಸುತ್ತಿರುವಾಗ, ಮಹಾಕುಂಭದ ಮೂಲಕ ನಾವು ಏಕತೆಯನ್ನು ಸಾರಿದ್ದೇವೆ. ಏಕತೆಯ ಈ ಭವ್ಯ ಪ್ರದರ್ಶನವು ನಮ್ಮ ದೊಡ್ಡ ಶಕ್ತಿಯಾಗಿದೆ. ವೈವಿಧ್ಯತೆಯಲ್ಲಿ ಏಕತೆ ಭಾರತದ ವಿಶೇಷತೆ ಎಂದು ನಾನು ಸದಾ ಹೇಳುತ್ತಾ ಬಂದಿದ್ದೇನೆ. ಇದನ್ನು ಪ್ರಯಾಗ್‌ರಾಜ್‌ನಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ನೋಡಿದ್ದೇವೆ” ಎಂದು ಅವರು ಹೇಳಿದರು.
ಭಾರತದ ಹೊಸ ಪೀಳಿಗೆಯು “ಸಂಪ್ರದಾಯಗಳು ಮತ್ತು ನಂಬಿಕೆಯನ್ನು ಹೆಮ್ಮೆಯಿಂದ ಅಪ್ಪಿಕೊಳ್ಳುತ್ತಾ” ಮಹಾಕುಂಭದೊಂದಿಗೆ ಸಂಪರ್ಕ ಸಾಧಿಸಿದ್ದನ್ನು ನೋಡಿ ನನ್ನ ಹೃದಯ ತುಂಬಿ ಬಂದಿದೆ ಎಂದೂ ಅವರು ಹಳಿದರು.
“ಕುಂಭಮೇಳದಲ್ಲಿ ಹಲವಾರು ರಾಜಕಾರಣಿಗಳು, ನಟರು ಮತ್ತು ವಿದೇಶಿ ಗಣ್ಯರು ಭಾಗವಹಿಸಿದ್ದರು. ಇಡೀ ಜಗತ್ತು ಭಾರತದ ಭವ್ಯತೆಯನ್ನು ಮಹಾ ಕುಂಭದ ರೂಪದಲ್ಲಿ ನೋಡಿದೆ… ಮಹಾ ಕುಂಭದಲ್ಲಿ ನಾವು ರಾಷ್ಟ್ರೀಯ ಜಾಗೃತಿಗೆ ಸಾಕ್ಷಿಯಾಗಿದ್ದೇವೆ, ಅದು ಹೊಸ ಸಾಧನೆಗಳಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ಶಕ್ತಿಯನ್ನು ಅನುಮಾನಿಸುವವರಿಗೆ ಇದು ಸೂಕ್ತ ಉತ್ತರ ನೀಡಿದೆ” ಎಂದೂ ಪ್ರಧಾನಿ ಮೋದಿ ಪ್ರತಿಪಾದಿಸಿದರು.