ಬೆಂಗಳೂರು: ಅಧಿಕಾರ ಸ್ವೀಕರಿಸಿ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಜೆಡಿಎಸ್ ವತಿಯಿಂದ ಇಲ್ಲಿನ ಜೆಪಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ (Felicitation Ceremony) ಅಭಿನಂದಿಸಿ ಗೌರವಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುಮಾರಸ್ವಾಮಿ, ಕಾರ್ಯಕರ್ತರ ಶ್ರಮಕ್ಕೆ 2008ರಿಂದಲೂ ಪ್ರತಿಫಲ ಸಿಕ್ಕಿರಲಿಲ್ಲ. ಈಗ ಸಿಕ್ಕಿದೆ. ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡ್ತೀನಿ. ಮೋದಿ (Narendra Modi) ಅವರು 2 ಬಾರಿ ಪ್ರಧಾನಿಯಾಗಿ ಉತ್ತಮವಾಗಿ ಕೆಲಸ ಮಾಡಿ, 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರ ಮಂತ್ರಿಮಂಡಲದಲ್ಲಿ ನನಗೆ ಸ್ಥಾನ ಸಿಕ್ಕಿದೆ. ಈ ಸಚಿವ ಸ್ಥಾನವನ್ನು ರಾಜ್ಯದ ಜನರಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ದೆಹಲಿ ನಾಯಕರು ದೇವೇಗೌಡರ ಮನೆಗೆ ಬಂದು ಒತ್ತಾಯ ಹಾಕಿ ನನಗೆ ಬಲವಂತವಾಗಿ ಸಿಎಂ ಸ್ಥಾನ ಕೊಟ್ಟಿದ್ದರು. ಇವತ್ತು ನಾನು ದೆಹಲಿಯಿಂದ ಕನ್ನಡ ನಾಡಿನ ಮಣ್ಣಿಗೆ ಪಾದಾರ್ಪಣೆ ಮಾಡಿದ್ದೇನೆ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದಾಗ ನಮ್ಮನ್ನ ಯಾವ ರೀತಿ ನಡೆಸಿ ಕೊಂಡಿದ್ದರು ಎಂಬುವುದು ಎಲ್ಲರಿಗೂ ಗೊತ್ತಿದೆ. ಆಗ ವಿಷಕಂಠ ಆಗಿದ್ದೇ ಅಂತ ಹೇಳಿದ್ದೆ. ನಾನು ಯಡಿಯೂರಪ್ಪಗೆ ಅಧಿಕಾರ ಕೊಡಬೇಕು ಅಂತ ಇದ್ದವನು ನಾನು, ಆದ್ರೆ ಅವರಿಗೆ ಅಧಿಕಾರ ಕೊಡಬಾರದು ಅಂತ ಕುತಂತ್ರ ನಡೆಯಿತು. ನಾನೂ ಸಹ ಆ ಕುತಂತ್ರಕ್ಕೆ ಬಲಿಯಾದೆ. ನಾನು ಪಕ್ಷ ಉಳಿಸಿಕೊಳ್ಳೋಕೆ 20 ತಿಂಗಳು ಕೆಲಸ ಮಾಡಿದೆ. ಅಂದು ಸಹ ನಾನು ಹಣದ ವ್ಯಾಮೋಹ ಬಲಿಯಾಗಿಲ್ಲ. ಲಾಟರಿ ನಿಷೇಧ ಮಾಡಿದೆ, ಸಾರಾಯಿ ನಿಷೇಧ ಮಾಡಿದೆ ಎಂದು ಹೇಳಿದ್ದಾರೆ.
2018ರಲ್ಲಿ ರಾಜ್ಯದ ವಿಷಯಗಳ ಬಗ್ಗೆ ಮೋದಿ ಅವರಿಗೆ ಮಾತಾಡೋಕೆ ಹೋಗಿದ್ದೆ, ಆಗ ನಿನ್ನ ಕೆಲಸಕ್ಕೆ ಬೆಲೆ ಇಲ್ಲ. ನೀನು ರಾಜೀನಾಮೆ ಕೊಟ್ಟು ಬಾ, ನೀನೇ ಸಿಎಂ ಆಗು ಅಂತ ಮೋದಿ ಹೇಳಿದ್ದರು. ಆವತ್ತು ಮೋದಿ ಮಾತು ಕೇಳಿದ್ದರೆ ಕಾರ್ಯಕರ್ತರು ಇಷ್ಟು ಕಷ್ಟ ಪಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
