ಜಮ್ಮು: ಜಮ್ಮು- ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಉಗ್ರರ ಸಂಹಾರ ಕಾರ್ಯಾಚರಣೆ ಶನಿವಾರ 9ನೇ ದಿನಕ್ಕೆ ಕಾಲಿಟ್ಟಿದ್ದು, ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಅತಿ ದೀರ್ಘವಾದ ಘರ್ಷಣೆಗಳಲ್ಲಿ ಒಂದಾಗಿದೆ.
ಭಯೋತ್ಪಾದಕರು ದಟ್ಟ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದು, ಕಳೆದ 9 ದಿನಗಳಿಂದಲೂ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಹೇಳಲಾಗಿದೆ.
“ದೇಶಕ್ಕಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವಾಗ ಸರ್ವೋಚ್ಚ ತ್ಯಾಗ ಮಾಡಿದ ಧೀರ ಯೋಧರಾದ ಲಾನ್ಸ್ ನಾಯಕ್ ಪ್ರಿತ್‌ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಅವರ ತ್ಯಾಗಕ್ಕೆ ಚಿನಾರ್ ಕಾರ್ಪ್ಸ್ ಗೌರವ ಸಲ್ಲಿಸುತ್ತದೆ.
ಅವರ ಧೈರ್ಯ ಮತ್ತು ಸಮರ್ಪಣೆ ನಮಗೆ ಸದಾ ಸ್ಫೂರ್ತಿ. ಭಾರತೀಯ ಸೇನೆಯು ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುತ್ತದೆ ಮತ್ತು ಅವರೊಂದಿಗೆ ಇರುತ್ತದೆ. ಕಾರ್ಯಾಚರಣೆ ಮುಂದುವರಿದಿದೆ” ಎಂದು ಸೇನೆಯ 15 ಕಾರ್ಪ್ಸ್ ಪ್ರಧಾನ ಕಚೇರಿ ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದೆ.
ಅಧಿಕೃತ ಮೂಲಗಳ ಪ್ರಕಾರ, ಶುಕ್ರವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಇನ್ನೂ ಇಬ್ಬರು ಸೈನಿಕರು ಗಾಯಗೊಂಡಿದ್ದು, ಗಾಯಗೊಂಡವರ ಒಟ್ಟು ಸಂಖ್ಯೆ 10ಕ್ಕೆ ಏರಿದೆ. ಅವಿತಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ನೂರಾರು ಯೋಧರು ಈ ಬೃಹತ್ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಹೇಗೆ ನಡೆಯುತ್ತಿದೆ ಕಾರ್ಯಾಚರಣೆ?
ಭದ್ರತಾ ಪಡೆಗಳು ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿ ಭಯೋತ್ಪಾದಕರನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿವೆ. ಈ ಉಗ್ರರು ಕಾಡಿನ ಯುದ್ಧ ತಂತ್ರಗಳಲ್ಲಿ ಉತ್ತಮ ತರಬೇತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅಖಾಲ್‌ನ ದಟ್ಟವಾದ ಆಲ್ಪೈನ್ ಕಾಡುಗಳಲ್ಲಿ ಅನುಮಾನಾಸ್ಪದ ಪ್ರದೇಶಗಳ ಮೇಲೆ ಡ್ರೋನ್‌ಗಳು ಬಾಂಬ್‌ಗಳನ್ನು ಹಾಕುತ್ತಿರುವ ದೃಶ್ಯಗಳು ಕಂಡುಬಂದಿವೆ. ಸೇನಾ ವಿಶೇಷ ಪಡೆಗಳು ಅಥವಾ ಪ್ಯಾರಾ-ಟ್ರೂಪರ್‌ಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯಾಚರಣೆ ಮುಂದುವರೆಸುತ್ತಿದ್ದಾರೆ. ಹೆಲಿಕಾಪ್ಟರ್‌ಗಳು ಆ ಪ್ರದೇಶದ ಮೇಲೆ ಹಾರಾಟ ನಡೆಸುತ್ತಿದ್ದು, ಡ್ರೋನ್‌ಗಳು ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ.
ಈ ಕಾರ್ಯಾಚರಣೆಯು ಕಳೆದ ಶುಕ್ರವಾರ ಆರಂಭವಾಗಿದ್ದು, ಅಖಾಲ್ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸೇನೆ, ಪೊಲೀಸ್ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆ ಆರಂಭಿಸಿವೆ. ಆರಂಭಿಕ ಘರ್ಷಣೆಯಲ್ಲಿ ಒಬ್ಬ ಸ್ಥಳೀಯ ಭಯೋತ್ಪಾದಕ ಹತನಾಗಿದ್ದ.
ಉಗ್ರರ ಸಂಹಾರ ಶತಃಸಿದ್ಧ
ಉನ್ನತ ಪೊಲೀಸ್ ಮತ್ತು ಸೇನಾ ಕಮಾಂಡರ್‌ಗಳು ವೈಯಕ್ತಿಕವಾಗಿ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. “ಕಠಿಣ ಭೂಪ್ರದೇಶ ಮತ್ತು ದಟ್ಟ ಅರಣ್ಯ ಪ್ರದೇಶದಿಂದಾಗಿ ಕಾರ್ಯಾಚರಣೆಗೆ ಸಮಯ ತೆಗೆದುಕೊಳ್ಳುತ್ತಿದೆ. ಆದರೆ ನಾವು ಅವರನ್ನು ಪತ್ತೆಹಚ್ಚಿಯೇ ತೀರುತ್ತೇವೆ” ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ನಳಿನ್ ಪ್ರಭಾತ್ ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಕಾರ್ಯಾಚರಣೆ ಆರಂಭವಾದಾಗ ಐವರು ಭಯೋತ್ಪಾದಕರು ಇದ್ದರು ಎಂಬ ಮಾಹಿತಿ ಇತ್ತು. ಅವರಲ್ಲಿ ಕನಿಷ್ಠ ಮೂವರು ಕಾಡಿನ ಯುದ್ಧ ತಂತ್ರಗಳಲ್ಲಿ ತರಬೇತಿ ಪಡೆದ ವಿದೇಶಿ ಭಯೋತ್ಪಾದಕರು ಎಂದು ಹೇಳಲಾಗಿದೆ. ಆಪರೇಷನ್ ಮಹಾದೇವ್ ಮೂಲಕ ಮೂವರು ಪಹಲ್ಗಾಮ್ ಉಗ್ರರನ್ನು ಸದೆಬಡಿದ ಕೆಲವೇ ದಿನಗಳಲ್ಲಿ ಕುಲ್ಗಾಂನಲ್ಲಿ ಈ ಕಾರ್ಯಾಚರಣೆ ಆರಂಭವಾಗಿದೆ.