ಉಡುಪಿ | ಗ್ರಾಮೀಣ ಪ್ರದೇಶಗಳು ಸೇರಿದಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ KSRTC ಬಸ್‌ಗಳನ್ನು ಓಡಿಸಲು ಜನರಿಂದ ಬೇಡಿಕೆ ಬರುತ್ತಿದೆ. ಎರಡೂ ಜಿಲ್ಲೆಗಳ ಶಾಸಕರ ಸಹ ಪಕ್ಷಾತೀತವಾಗಿ ಸರಕಾರಿ ಬಸ್ ಕುರಿತಂತೆ ಸಹಮತ ವ್ಯಕ್ತಪಡಿಸಿದ್ದಾರೆ. ಇಲಾಖೆಯಿಂದಲೂ ನಾವು ಬಸ್ ಓಡಿಸಲು ಉತ್ಸುಕರಾಗಿದ್ದೇವೆ. ಆದರೆ, ಜಿಲ್ಲೆಯ ಖಾಸಗಿ ಬಸ್‌ಗಳ ಮಾಲಕರು ನ್ಯಾಯಾಲಯಗಳ ಮೂಲಕ ತರುವ ತಡೆಯಾಜ್ಞೆಯಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಸಾರಿಗೆ ಮತ್ತು ಮುಜುರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬೈಂದೂರಿನಲ್ಲಿ ನೂತನ KSRTC ಬಸ್ ನಿಲ್ದಾಣ ಉದ್ಘಾಟಿಸಲು ಆಗಮಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳದ್ದೇ ಪಾರುಪತ್ಯ. ನಾವು ಸಾರ್ವಜನಿಕರ ಬೇಡಿಕೆಯಂತೆ ಹೊಸ ಪರ್ಮಿಟ್ ಪಡೆದು ಬಸ್ ಓಡಿಸಲು ಮುಂದಾದರೆ ಅವರು ಪದೇ ಪದೇ ಕೋರ್ಟ್‌ಗೆ ಹೋಗುತ್ತಿದ್ದು, ಇದರಿಂದ ಸರಕಾರಿ ಬಸ್ ಹಾಕಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕರೆದು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸಿಲಿಂಡರ್ ಬ್ಲಾಸ್ಟ್ ಬೆನ್ನಲ್ಲೇ ಮೈಸೂರಿನ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್ | ಅನುಮಾನಸ್ಪದ ವ್ಯಕ್ತಿಗಳ ವಿಚಾರಣೆ!



















