ಬೆಂಗಳೂರು: ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET Exam 2025)ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಗಸ್ಟ್ 18ರಿಂದ ಅರ್ಜಿಗಳ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 18 ಕೊನೆಯ ದಿನವಾಗಿದೆ. ಸೆಪ್ಟೆಂಬರ್ 19ರವರೆಗೆ ಫೀಸ್ ಕಟ್ಟಬಹುದಾಗಿದೆ.
ಒಟ್ಟು 33 ವಿಷಯಗಳಲ್ಲಿ ಕೆ-ಸೆಟ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು, ಪ್ರಥಮ ದರ್ಜೆ ಕಾಲೇಜುಗಳು ಸೇರಿ ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹತೆ ಪಡೆಯುತ್ತಾರೆ.
ಆನ್ ಲೈನ್ ಮೂಲಕ ಸಲ್ಲಿಸುವ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು. ಬೇರೆ ಯಾವುದೇ ವಿಧಾನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್ ಸೈಟ್ ಆಗಿರುವ https://cetonline.karnataka.gov.in/kea/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲ ನಿಬಂಧನೆಗಳನ್ನು ವಿಧಿಸಲಾಗಿದೆ. ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಹೊಂದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಶೇ.55ರಷ್ಟು ಅಂಕ ಪಡೆದಿರಬೇಕು. ಎಸ್ಸಿ, ಎಸ್ಟಿ, ಒಬಿಸಿ, ವಿಶೇಷ ಚೇತನ ಅಭ್ಯರ್ಥಿಗಳು ಶೇ.50ರಷ್ಟು ಅಂಕಗಳನ್ನು ಪಡೆದಿದ್ದರೆ ಸಾಕು.
ಕೆ-ಸೆಟ್ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ತೇರ್ಗಡೆ ಹೊಂದಿದವರು ಅದೇ ವಿಷಯದಲ್ಲಿ ಮತ್ತೆ ಪರೀಕ್ಷೆಗೆ ಕುಳಿತುಕೊಳ್ಳುವ ಅವಕಾಶ ಇಲ್ಲ. ಹಾಗೆ ಅರ್ಜಿ ಸಲ್ಲಿಸಿದರೆ, ಅವರ ಹಿಂದಿನ ಅರ್ಹತೆಯನ್ನು ಕೂಡ ರದ್ದುಗೊಳಿಸಲಾಗುವುದು. ಅರ್ಜಿ ಸಲ್ಲಿಸಿದ ಬಳಿಕ ಅಕ್ಟೋಬರ್ 24ರಂದು ಹಾಲ್ ಟಿಕೆಟ್ ನೀಡುವ ನಿರೀಕ್ಷೆ ಇದೆ. ನವೆಂಬರ್ 2ರಂದು ಪರೀಕ್ಷೆ ನಡೆಯುವ ಸಾಧ್ಯತೆ ಇದೆ.



















