ಬೆಂಗಳೂರು : ಸಚಿವರ ವಿರೋಧದ ನಡುವೆಯೂ ಒಳಮೀಸಲಾತಿ ಅನ್ವಯಿಸದೆ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗಿದೆ. 817 ಸಹಾಯಕ ಕೃಷಿ ಅಧಿಕಾರಿಗಳೂ ಸೇರಿ 945 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ಮುಂದಾಗಿದ್ದು, ಕೃಷಿ ಇಲಾಖೆಯಲ್ಲಿ ‘ಎ’ ಮತ್ತು ‘ಬಿ’ ವೃಂದದ 3,319 ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ‘ಎ’ ವೃಂದದ 128 ಹುದ್ದೆಗಳೂ ಸೇರಿ 945 ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಲು ಕೋರಿ ಕೆಪಿಎಸ್‌ಸಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ.
2024ನೇ ಸೆಪ್ಟೆಂಬರ್ 20ರಂದು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಅದೇ ವೇಳೆಗೆ ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದಿದ್ದರಿಂದ ಅಧಿಸೂಚನೆ ರದ್ದು ಮಾಡಲಾಗಿತ್ತು. ಕೆಪಿಎಸ್‌ಸಿ ಮತ್ತೆ 2024ನೇ ಡಿಸೆಂಬರ್ 31ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಿತ್ತು. ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ದತ್ತಾಂಶ ಸಂಗ್ರಹಿಸಿ, ಒಳ ಮೀಸಲಾತಿ ಕಲ್ಪಿಸುವ ಕುರಿತು ಪರಿಶೀಲಿಸಿ, ಸರ್ಕಾರದ ಸ್ಪಷ್ಟ ಸೂಚನೆ ಇದ್ದರೂ ಕೆಪಿಎಸ್‌ಸಿಯು ಕಲ್ಯಾಣ ಕರ್ನಾಟಕದ 273 ಹುದ್ದೆಗಳಿಗೂ ಸೇರಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಪರೀಕ್ಷಾ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದೆ.



















