ನಾಗ್ಪುರ : ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ ಎಸ್), ಅಕ್ಟೋಬರ್ 2 ರಂದು ವಿಜಯದಶಮಿಯಿಂದ ಆರಂಭವಾಗುವ ಕಾರ್ಯಕ್ರಮಗಳೊಂದಿಗೆ ತನ್ನ ಶತಮಾನೋತ್ಸವ ವರ್ಷವನ್ನು ಆಚರಿಸಲಿದೆ.
ಆರ್.ಎಸ್.ಎಸ್ ನ ಈ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ.
2026ರ ವಿಜಯದಶಮಿಯವರೆಗೆ ಸಂಘಟನೆಯ 100 ವರ್ಷಗಳನ್ನು ಆಚರಿಸುವ ಕಾರ್ಯಕ್ರಮಗಳು ನಡೆಯಲಿವೆ ಎಂದು ಆರ್.ಎಸ್.ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಸೋಮವಾರ ನಾಗ್ಪುರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ಅಕ್ಟೋಬರ್ 2 ರಂದು, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಜಯದಶಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಪಂಚದಾದ್ಯಂತ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಜಾಜ್ ಫಿನ್‌ಸರ್ವ್ ಅಧ್ಯಕ್ಷ ಸಂಜೀವ್ ಬಜಾಜ್, ಡೆಕ್ಕನ್ ಇಂಡಸ್ಟ್ರೀಸ್‌ನ ಕೆ.ವಿ. ಕಾರ್ತಿಕ್ ಮತ್ತು ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್ ಕಲಿತಾ ಅವರು ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದಾರೆ” ಎಂದು ಅಂಬೇಕರ್ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 2 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಘಾನಾ, ದಕ್ಷಿಣ ಆಫ್ರಿಕಾ, ಥೈಲ್ಯಾಂಡ್, ಇಂಡೋನೇಷ್ಯಾ, ಯುಕೆ ಮತ್ತು ಯುಎಸ್ಎಗಳಿಂದ ಅತಿಥಿಗಳು ಭಾಗವಹಿಸಲಿದ್ದು, ವಿದೇಶಿ ಮಾಧ್ಯಮಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ಅವರು ಹೇಳಿದರು.



















