ಕೊಪ್ಪಳ : ಸರ್ಕಾರಿ ಶಾಲೆಯ ಉಳಿವಿಗಾಗಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರ ಯೋಜನೆಯು ಮಾದರಿ ನಡೆಯಾಗಿದೆ.
ಕಾರ್ಪೊರೇಟ್ ಕಂಪನಿಗಳಿಂದ ಬರುವ ಸಿ.ಎಸ್.ಆರ್ ಫಂಡ್ ನಿಂದ ಶಾಲೆಗಳ ನಿರ್ಮಾಣಕ್ಕೆ ಚಿಂತನೆ ಮಾಡಿದ್ದು, 8 ಕೋಟಿ ರೂ. ನಿಧಿ ಬಳಸಿಕೊಂಡು ಜಿಲ್ಲೆಯ ವಿವಿಧೆಡೆ ಶಾಲೆ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಸಿ.ಎಸ್.ಆರ್ ಫಂಡ್ ಒದಗಿಸುವಂತೆ ಕಾರ್ಖಾನೆಗಳಿಗೆ ಸೂಚನೆ ನೀಡಿದ್ದಾರೆ.
ಸಿಎಂ ಸಲಹೆ ಮೇರೆಗೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ(ಸಿ.ಎಸ್.ಆರ್) ಯಿಂದ ಸರ್ಕಾರಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಳಕೆ ಮಾಡಿಕೊಳ್ಳಲು ಜಿಲ್ಲೆಯಲ್ಲಿ ಇರುವ ಕಾರ್ಖಾನೆಗಳಿಂದ ಸಿ.ಎಸ್.ಆರ್ ಫಂಡ್ ಸಂಗ್ರಹ ಮಾಡಲಾಗಿದೆ.
ಕಾರ್ಖಾನೆಗಳ ಮಾಲೀಕರು ಸಿ.ಎಸ್.ಆರ್ ಫಂಡ್ ನೀಡಲು ಒಪ್ಪಿಗೆ ಸೂಚಿಸಿದ್ದು, ಈ ವರ್ಷದ ನಿಧಿಯನ್ನು ಸರ್ಕಾರಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಬಳಸಿಕೊಂಡು, ಮುಂದಿನ ವರ್ಷದ ನಿಧಿಯನ್ನು ಸಾರ್ವಜನಿಕರ ಆರೋಗ್ಯಕ್ಕೆ ಬಳಸಿಕೊಳ್ಳಲು ಚಿಂತನೆ ಮಾಡಿದ್ದಾರೆ.