ಯಾದಗಿರಿ : ಜಿಲ್ಲೆಯ ತಳವಾರ ಸಮುದಾಯ ಪರಿಶಿಷ್ಟ ಪಂಗಡ ಜಾತಿ ಮತ್ತು ಸಿಂಧುತ್ವ ನೀಡದಂತೆ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಅಂಬಿಗರ ಚೌಡಯ್ಯನವರಿಗೆ ಅವಹೇಳನಕಾರಿ ಮಾತನಾಡಿರುವ ನಾಯಕ್ ಸಮುದಾಯದ ಕೆಲ ಮುಖಂಡರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೆರಿಕೆಗೆ ಒತ್ತಾಯಿಸಿ ಸೋಮವಾರ (ಸೆ.1) ಜಿಲ್ಲಾ ಕೋಲಿ ಸಮಾಜ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗಿಯಾದರು.
ಯಾದಗಿರಿ, ಕಲಬುರಗಿ, ರಾಯಚೂರು, ಬೀದರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಸೇರಿದ ಸಮಾಜದ ಜನರು ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಚುರುಕು ಮುಟ್ಟಿಸಿದರು.
ಇಲ್ಲಿನ ತಹಸಿಲ್ ಕಚೇರಿ ಬಳಿ ಜಮಾಗೊಂಡ ಜನರು ಬೇಡಿಕೆಗಳಿಗೆ ಆಗ್ರಹಿಸಿ ಘೋಷಣೆ ಕೂಗಿದರು. ಅಲ್ಲಿಂದ ಮೆರವಣಗೆ ಮೂಲಕ ನೇತಾಜಿ ಸರ್ಕಲ್ ಬಳಿ ಆಗಮಿಸಿ ಜಮಾಗೊಂಡು ಬೃಹತ್ ಬಹಿರಂಗ ಸಭೆ ನಡೆಸಿದರು. ಈ ವೇಳೆ ಸಮಾಜದ ಮುಖಂಡರಾದ ಮಾಜಿ ಸಚಿವ ಬಾಬುರಾವ ಚಿಂಚನಸೂರ, ಹಿರಿಯ ಮುಖಂಡರಾದ ಶರಣಪ್ಪ ಮಾನೆಗಾರ, ಮೌಲಾಲಿ ಅನಪುರ, ಸಾಯಿಬಣ್ಣಾ ಬೋರಬಂಡಾ, ಶೋಭಾ ಬಾಣಿ, ಭೀಮಣ್ಣಾ ಶಕಾಪುರ ಹಾಗೂ ಸಮಾಜದ ಶ್ರೀಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.