ನವದೆಹಲಿ: ಭಾರತ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿಯ(Virat Kohli) ಬಹುನಿರೀಕ್ಷತ ರಣಜಿ ಪಂದ್ಯ ನಿರಾಸೆಯಿಂದ ಆರಂಭಗೊಂಡಿತು. ಅವರು6 ರನ್‌ಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ರೈಲ್ವೇಸ್ ವಿರುದ್ಧ ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ‘ಡಿ’ ಗುಂಪಿನ ಪಂದ್ಯದ ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ನಡೆಸಿದ ಕೊಹ್ಲಿ 15 ಎಸೆತ ಎದುರಿಸಿ 6ಗಳಿಸಿ ಹಿಮಾಂಶು ಸಾಂಗ್ವಾನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಕೊಹ್ಲಿಯ ಆಟ ನೋಡಲು ಸಾಗರೋಪಾದಿಯಲ್ಲಿ ಹರಿದು ಅಭಿಮಾನಿಗಳು ಕೊಹ್ಲಿ ಔಟಾಗುತ್ತಿದ್ದಂತೆ ನಿರಾಸೆಗೊಂಡು ಸ್ಟೇಡಿಯಮ್‌ನಿಂದ ಮರಳಿದರು.
ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5 ಪಂದ್ಯಗಳಲ್ಲಿ ಕೊಹ್ಲಿ ಸಂಪೂರ್ಣ ವಿಫಲರಾಗಿದ್ದರು. ಹೀಗಾಗಿ ಅವರ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. 8 ಇನ್ನಿಂಗ್ಸ್‌ಗಳಲ್ಲಿ ಆಫ್ ಸ್ಟಂಪ್‌ನಿಂದ ಹೊರ ಹೋಗುವ ಚೆಂಡನ್ನು ಕೆಣಕಿ ವಿಕೆಟ್ ಕಳೆದುಕೊಂಡಿದ್ದರು. ಫಾರ್ಮ್‌ಗ ಮರಳಲು ಕೊಹ್ಲಿ 12 ವರ್ಷಗಳ ಬಳಿಕ ರಣಜಿ(Ranji Trophy) ಆಡಲಿಳಿದಿದ್ದರು. ಆದರೆ ಮೊದಲ ಇನಿಂಗ್ಸ್‌ನಲ್ಲಿ ವಿಫಲರಾದರು.
ಕೇವಲ ಒಂದು ಫೋರ್
ಇದು ವಿರಾಟ್ ಕೊಹ್ಲಿಗೆ ಅಥವಾ ಅವರ ಅಭಿಮಾನಿಗಳಿಗೆ ನಿರೀಕ್ಷಿತ ಆಟವಾಗಿರಲಿಲ್ಲ. 12 ವರ್ಷಗಳ ನಂತರ ದೇಶೀಯ ಕ್ರಿಕೆಟ್‌ಗೆ ಮರಳಿದ ಕೊಹ್ಲಿ ಆಟದ ಬಗ್ಗೆ ಅಭಿಮಾನಿಗೆ ಅಪಾರ ನಿರೀಕ್ಷೆ ಇತ್ತು. ಅವರ ಆಫ್-ಸ್ಟಂಪ್ ಹಾರಿ ಹೋಗುತ್ತಿದ್ದಂತೆ, ಸ್ಟೇಡಿಯಂ ಸಂಪೂರ್ಣ ಮೌನವಾಯಿತು. ಕೊಹ್ಲಿ ಕೇವಲ ಒಂದು ಬೌಂಡರಿ (ಸ್ಟ್ರೇಟ್ ಡ್ರೈವ್) ಮತ್ತು 2 ಸಿಂಗಲ್ಸ್ ಗಳಿಸಿದರು.
ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಭಾರೀ ಹಿನ್ನಡೆಯಲಿದ್ದಾರೆ. ಅವರು ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ರನ್ ಗಳಿಸಲು ವಿಫಲರಾದರು. ಆಸ್ಟ್ರೇಲಿಯಾದಲ್ಲಿ, ಪರ್ಥ್ ಪಂದ್ಯದಲ್ಲಿ ಅಜೇಯ ಶತಕ ದಾಖಲಿಸಿದ್ದರು. ಆದರೆ, ಒಟ್ಟು ಸರಣಿಯಲ್ಲಿ ಅವರು 11 ಇನಿಂಗ್ಸ್‌ಗಳಲ್ಲಿ ಕೇವಲ 191 ರನ್‌ಗಳನ್ನು ಗಳಿಸಿದರು.
ರಣಜಿ ಟ್ರೋಫಿಗೆ ಮರಳಿದರೂ ಅವರ ಕಷ್ಟ ಮುಂದುವರಿದಿದೆ. ಕೇವಲ 15 ಚೆಂಡುಗಳು ಮಾತ್ರ ಆಡಿದ್ದಾರೆ. ಅದರಲ್ಲಿ 2 ಸಿಂಗಲ್ಸ್ ಮತ್ತು 1 ಬೌಂಡರಿ ಇತ್ತು.
ಅಭಿಮಾನಿಗಳ ಆಕ್ರೋಶ
ಬೆಳಿಗ್ಗೆ 5 ಗಂಟೆಯಿಂದ ಸ್ಟೇಡಿಯಂ ಹೊರಗೆ ನಿರೀಕ್ಷೆಯಿಂದ ಕಾಯುತ್ತಿದ್ದ ಅಭಿಮಾನಿಗಳು ಕೊಹ್ಲಿ ಔಟ್ ಆದ ಕ್ಷಣದಲ್ಲೇ ಆಕ್ರೋಶಗೊಂಡು ತಕ್ಷಣವೇ ಸ್ಟೇಡಿಯಂ ಬಿಟ್ಟರು. ಕೊಹ್ಲಿಯು ತಕ್ಷಣವೇ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಸಾಬೀತುಪಡಿಸಬೇಕಾಗಿದೆ. ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕ ದಿನ ಸರಣಿಯಲ್ಲಿ ಆಡಲಿದ್ದಾರೆ.