ಗರಿಯಾಬಂದ್ (ಛತ್ತೀಸ್‌ಗಢ): ಛತ್ತೀಸ್‌ಗಢದ ಒಂದು ಸಣ್ಣ ಹಳ್ಳಿಯಲ್ಲಿರುವ ಕಿರಾಣಿ ಅಂಗಡಿಯೊಂದು ಇದ್ದಕ್ಕಿದ್ದಂತೆ ಇಡೀ ಕ್ರಿಕೆಟ್ ಲೋಕದ ಸಂಪರ್ಕ ಕೇಂದ್ರವಾಗಿ ಬದಲಾದರೆ ಹೇಗಿರುತ್ತೆ? ಇದು ನಂಬಲು ಕಷ್ಟವೇ? ಆದರೂ ಅಂಥದ್ದೊಂದು ಅಚ್ಚರಿನಿಜಕ್ಕೂ ನಡೆದುಹೋಗಿದೆ.
ಗರಿಯಾಬಂದ್ ಜಿಲ್ಲೆಯ ಮಾದಗಾಂವ್ ಎಂಬ ಹಳ್ಳಿಯಲ್ಲಿ ಇಬ್ಬರು ಸ್ನೇಹಿತರಾದ ಮನೀಶ್ ಬಿಸಿ ಮತ್ತು ಖೇಮರಾಜ್‌ಗೆ ಕ್ರಿಕೆಟ್ ದಿಗ್ಗಜರ ಕರೆಗಳು ಬಂದಾಗ ಇಡೀ ಹಳ್ಳಿಯೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿತ್ತು.
ಕ್ರಿಕೆಟ್ ಲೋಕದ ಹಾಟ್‌ಲೈನ್ ಆದ ಹೊಸ ಸಿಮ್ ಕಾರ್ಡ್
ಇದೆಲ್ಲಾ ಶುರುವಾಗಿದ್ದು ಮನೀಶ್ ಜೂನ್ 28ರಂದು ಹೊಸ ಜಿಯೋ ಸಿಮ್ ಕಾರ್ಡ್ ಖರೀದಿಸಿದ ಮೇಲೆ. ಸಿಮ್ ಅನ್ನು ಫೋನ್‌ನಲ್ಲಿ ಹಾಕಿ ವಾಟ್ಸ್ ಆ್ಯಪ್ ತೆರೆದಾಗ, ಪ್ರೊಫೈಲ್ ಫೋಟೋದಲ್ಲಿ ಕ್ರಿಕೆಟಿಗ ರಜತ್ ಪಾಟಿದಾರ್ ಅವರ ಚಿತ್ರ ಕಾಣಿಸಿತು. ಆರಂಭದಲ್ಲಿ ಇದೊಂದು ತಮಾಷೆ ಎಂದೇ ಸ್ನೇಹಿತರು ಭಾವಿಸಿದ್ದರು. ಆದರೆ ನಿಜವಾದ ಆಟ ಶುರುವಾಗಿದ್ದು ನಂತರ.

ಸಿಮ್ ಆಕ್ಟಿವ್ ಆದ ತಕ್ಷಣ, ಸತತವಾಗಿ ಕರೆಗಳು ಬರಲಾರಂಭಿಸಿದವು. ಆದರೆ ಅವು ಸಾಮಾನ್ಯ ಕರೆಗಳಾಗಿರಲಿಲ್ಲ. “ನಾನು ವಿರಾಟ್ ಕೊಹ್ಲಿ ಮಾತನಾಡುತ್ತಿದ್ದೇನೆ”, “ನಾನು ಎಬಿ ಡಿವಿಲಿಯರ್ಸ್”, “ನಾನು ರಜತ್ ಪಾಟಿದಾರ್” ಎಂದು ಹೇಳುವ ಧ್ವನಿಗಳು ಕೇಳಿಬಂದವು. ಆರಂಭದಲ್ಲಿ ಇದನ್ನೆಲ್ಲಾ ತಮಾಷೆ ಎಂದು ಭಾವಿಸಿದ ಮನೀಶ್ ಮತ್ತು ಖೇಮರಾಜ್, ತಮ್ಮನ್ನು “ಮಹೇಂದ್ರ ಸಿಂಗ್ ಧೋನಿ” ಎಂದು ಹೇಳಿಕೊಂಡು ತಮಾಷೆ ಮಾಡುತ್ತಿದ್ದರು.
ಪೊಲೀಸರು ಬಾಗಿಲಿಗೆ ಬಂದಾಗ ಸತ್ಯ ಬಯಲು
ಜುಲೈ 15ರಂದು ಮತ್ತೊಂದು ಕರೆ ಬಂತು. ಆ ಕಡೆಯಿಂದ ವಿನಮ್ರತೆಯ ಧ್ವನಿ ಕೇಳಿಸಿತು: “ಭಾಯ್, ನಾನು ರಜತ್ ಪಾಟಿದಾರ್. ಆ ನಂಬರ್ ನನ್ನದು, ದಯವಿಟ್ಟು ವಾಪಸ್ ಕೊಡಿ” ಎಂಬ ಮಾತು. ಆಗಲೂ ತಮಾಷೆ ನಿಲ್ಲಿಸದ ಸ್ನೇಹಿತರು, “ನಾವು ಎಂ.ಎಸ್. ಧೋನಿ” ಎಂದು ಹೇಳಿದರು.
ಪಾಟಿದಾರ್ ತಾಳ್ಮೆಯಿಂದ, “ಆ ನಂಬರ್ ನನ್ನದು. ನನ್ನ ತರಬೇತುದಾರರು ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಅದು ಬಹಳ ಮುಖ್ಯವಾಗಿ ಬೇಕಾಗಿದೆ” ಎಂದು ವಿವರಿಸಿದರು. ಇಷ್ಟು ಹೇಳಿದ ಮೇಲೂ ತಮಾಷೆ ನಿಲ್ಲದಾಗ ಅವರು, “ಪೊಲೀಸರನ್ನು ಕಳುಹಿಸುತ್ತೇನೆ” ಎಂದು ಶಾಂತವಾಗಿ ಹೇಳಿದರು. ಪಾಟಿದಾರ್ ಈ ಮಾತನ್ನು ಹೇಳಿದ ಹತ್ತು ನಿಮಿಷಗಳಲ್ಲೇ ಪೊಲೀಸರು ಮಾದಗಾಂವ್ ಹಳ್ಳಿಯ ಅಂಗಡಿಯ ಬಾಗಿಲಲ್ಲಿದ್ದರು. ಪೊಲೀಸರು ಬಂದಾಗಲೇ ಮನೀಶ್ ಬಿಸಿ ಮತ್ತು ಖೇಮರಾಜ್‌ಗೆ ಅರಿವಾಗಿದ್ದು, ತಾವು ಮಾತನಾಡಿದ್ದು ನಿಜವಾದ ರಜತ್ ಪಾಟಿದಾರ್ ಅವರೊಂದಿಗೆ ಎಂದು! ಕೂಡಲೇ ಅವರು ಸಿಮ್ ಕಾರ್ಡ್ ಅನ್ನು ವಾಪಸ್ ನೀಡಿದರು.
ಕ್ರಿಕೆಟಿಗರ ಅಭಿಮಾನಿ ಖೇಮರಾಜ್‌ಗೆ ಇದು ಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿತ್ತು. “ಒಂದು ತಪ್ಪು ನಂಬರ್‌ನಿಂದಾಗಿ ನನಗೆ ಕೊಹ್ಲಿಯೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ನನ್ನ ಜೀವನದ ಗುರಿ ಈಡೇರಿತು,” ಎಂದು ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ.
ಟೆಲಿಕಾಂ ಕಂಪನಿಗಳು 90 ದಿನಗಳಿಗಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ನಂಬರ್‌ಗಳನ್ನು ಮರುಬಳಕೆ ಮಾಡುತ್ತವೆ. ರಜತ್ ಪಾಟಿದಾರ್ ಅವರ ಹಳೆಯ ನಂಬರ್ ಇದೇ ರೀತಿ ಮನೀಶ್‌ಗೆ ಹಂಚಿಕೆಯಾಗಿ, ಈ ಅನಿರೀಕ್ಷಿತ ಘಟನೆಗೆ ಕಾರಣವಾಗಿತ್ತು. ಈಗ ಮಾದಗಾಂವ್ ಗ್ರಾಮಸ್ಥರು ತಮ್ಮ ಹಳ್ಳಿಯು ‘ಕ್ರಿಕೆಟ್ ನಕ್ಷೆಯಲ್ಲಿ’ ಸೇರಿತು ಎಂದು ತಮಾಷೆ ಮಾಡಿಕೊಳ್ಳುತ್ತಿದ್ದಾರೆ.