ಬೆಂಗಳೂರು: ಬಾಣಸವಾಡಿಯ ಅಂಜನೇಯಸ್ವಾಮಿ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಕೋದಂಡರಾಮಸ್ವಾಮಿ ದೇವರ ಬ್ರಹ್ಮರಥೋತ್ಸವದ ಹಿನ್ನೆಲೆ, ಏಪ್ರಿಲ್ 12ರಿಂದ 15ರವರೆಗೆ ವಾಹನ ಸಂಚಾರದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ದೊಡ್ಡ ಬಾಣಸವಾಡಿ ಮುಖ್ಯರಸ್ತೆಯಲ್ಲಿ (ಮುಕುಟಮ್ಮ ದೇವಸ್ಥಾನ ಬಸ್ ನಿಲ್ದಾಣದಿಂದ ಸಿಲ್ಕ್ ಫ್ಯಾಕ್ಟರಿ ಬಸ್ ನಿಲ್ದಾಣದವರೆಗೆ) ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು:
ರಾಮಮೂರ್ತಿ ನಗರದಿಂದ ಬೆಂಗಳೂರು ನಗರ ಕಡೆಗೆ:
ವಾಹನ ಸವಾರರು ದೊಡ್ಡ ಬಾಣಸವಾಡಿ ಮುಖ್ಯರಸ್ತೆಯ ಮುಕುಟಮ್ಮ ದೇವಸ್ಥಾನದ ಬಳಿ ಬಲ ತಿರುವು ಪಡೆದು ಹೊರಮಾವು ಜಂಕ್ಷನ್ ತಲುಪಬೇಕು. ಅಲ್ಲಿಂದ 100 ಅಡಿ ರಸ್ತೆಗೆ ಎಡ ತಿರುವು ಪಡೆದು ವೇಮಣ್ಣ ಜಂಕ್ಷನ್ ತಲುಪಬೇಕು. ನಂತರ ಬಾಣಸವಾಡಿ ಮುಖ್ಯರಸ್ತೆಗೆ ಬಲ ತಿರುವು ಪಡೆದು ನಗರ ಕಡೆಗೆ ಸಂಚರಿಸಬಹುದು.
ಬಾಣಸವಾಡಿಯಿಂದ ರಾಮಮೂರ್ತಿ ನಗರ / ಕೆ.ಆರ್.ಪುರ ಕಡೆಗೆ:
ವಾಹನ ಸವಾರರು ಬಾಣಸವಾಡಿ ಮುಖ್ಯರಸ್ತೆ ಮೂಲಕ ವೇಮಣ್ಣ ಜಂಕ್ಷನ್ ತಲುಪಬೇಕು. ಅಲ್ಲಿಂದ ನೇರವಾಗಿ ಚಲಿಸಿ ಸಿಲ್ಕ್ ಫ್ಯಾಕ್ಟರಿ ಬಳಿ ಬಲ ತಿರುವು ಪಡೆದು ಭುವನಗಿರಿ ರಸ್ತೆಯ ಮೂಲಕ ರಾಮಮೂರ್ತಿ ನಗರ ಹೊರವರ್ತುಲ ರಸ್ತೆ ತಲುಪಿ ಮುಂದೆ ಸಾಗಬಹುದು.



















