ಬೆಂಗಳೂರು : ಐಪಿಎಲ್ 2026ರ ಕ್ರೇಜ್ ಶುರುವಾಗುವ ಮೊದಲೇ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ’ (KMF) ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಅಧಿಕೃತ ಪಾಲುದಾರನಾಗಿ ಕೈ ಜೋಡಿಸಿದೆ. ಕಳೆದ ಹಲವು ವರ್ಷಗಳಿಂದ ಈ ಪಾಲುದಾರಿಕೆಗಾಗಿ ಕೆಎಂಎಫ್ ಪ್ರಯತ್ನ ನಡೆಸುತ್ತಿತ್ತು, ಈಗ ಅದು ಅಧಿಕೃತವಾಗಿ ಜಾರಿಗೆ ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ (MD) ಶಿವಸ್ವಾಮಿ ಅವರು, “ಒಂದು ವರ್ಷದ ಅವಧಿಗೆ ಆರ್‌ಸಿಬಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಪ್ರಾಯೋಜಕತ್ವಕ್ಕಾಗಿ ಕೆಎಂಎಫ್ ಒಟ್ಟು 4.8 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ,” ಎಂದು ತಿಳಿಸಿದ್ದಾರೆ. ಟಿ-ಟ್ವೆಂಟಿ ವಿಶ್ವಕಪ್‌ನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳಿಗೆ ಯಶಸ್ವಿಯಾಗಿ ಪ್ರಾಯೋಜಕತ್ವ ನೀಡಿದ ಬಳಿಕ, ಈಗ ಸ್ಥಳೀಯವಾಗಿ ಆರ್‌ಸಿಬಿ ಮೂಲಕ ದೊಡ್ಡ ಮಟ್ಟದ ಪ್ರಚಾರಕ್ಕೆ ಕೆಎಂಎಫ್ ಮುಂದಾಗಿದೆ.
ಆರ್‌ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ, ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನ ಪರಿಚಯವಾಗಲಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್ರಿಂದ KMF ಉತ್ಪನ್ನ ಪ್ರಚಾರಕ್ಕೆ ಮುಂದಾಗಿದ್ದೇವೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ (MD) ಶಿವಸ್ವಾಮಿ ತಿಳಿಸಿದ್ದಾರೆ.
ನಂದಿನಿಯ ಆಯ್ದ ಉತ್ಪನ್ನಗಳಾದ ಗುಡ್ ಲೈಫ್ ಹಾಲು, ಪನ್ನೀರ್ ಮತ್ತು ಇತರ ಡೈರಿ ಪದಾರ್ಥಗಳ ಪ್ಯಾಕೆಟ್‌ಗಳ ಮೇಲೆ ಆರ್‌ಸಿಬಿ ಆಟಗಾರರ ಭಾವಚಿತ್ರಗಳು ರಾರಾಜಿಸಲಿವೆ. ಇದು ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಐಪಿಎಲ್ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಮೈದಾನದಲ್ಲೂ ನಂದಿನಿ ಉತ್ಪನ್ನಗಳ ಹವಾ ಇರಲಿದೆ. ಆರ್‌ಸಿಬಿಯ ಎಲ್ಲಾ ಪಂದ್ಯಗಳ ವೇಳೆಯೂ ಕ್ರೀಡಾಂಗಣದಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದರೊಂದಿಗೆ ಆಟಗಾರರ ಟಿ-ಶರ್ಟ್ ಮೇಲೆಯೂ ನಂದಿನಿ ಬ್ರ್ಯಾಂಡ್ ಲೋಗೋ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇನ್ನು, ಕರ್ನಾಟಕದ ಅತಿ ದೊಡ್ಡ ಹಾಲು ಉತ್ಪಾದಕ ಒಕ್ಕೂಟ ಮತ್ತು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ಒಂದಾಗಿರುವುದು ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಇದು ಕೇವಲ ಒಂದು ಪ್ರಾಯೋಜಕತ್ವವಲ್ಲ, ಬದಲಿಗೆ ಸ್ಥಳೀಯ ಬ್ರ್ಯಾಂಡ್‌ಗೆ ಜಾಗತಿಕ ವೇದಿಕೆಯಲ್ಲಿ ಮನ್ನಣೆ ಸಿಗುವ ಪ್ರಯತ್ನವಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಇದನ್ನೂ ಓದಿ : ಡೀಸೆಲ್ ವಾಹನಗಳಿಗೆ ಎದುರಾದ ‘ಯೂರಿಯಾ’ ಸಂಕಷ್ಟ.. ಸ್ಥಗಿತಗೊಳ್ಳುವ ಭೀತಿಯಲ್ಲಿ ದೇಶದ ಸಾರಿಗೆ ವ್ಯವಸ್ಥೆ!



















