ರಾಜ್‌ಕೋಟ್: ಇಲ್ಲಿನ ಮೈದಾನದಲ್ಲಿ ಜನವರಿ 14 ರಂದು ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ಭಾರತದ ಮಧ್ಯಮ ಕ್ರಮಾಂಕದ ಆಧಾರಸ್ತಂಭ, ಕನ್ನಡಿಗ ಕೆ.ಎಲ್. ರಾಹುಲ್ ಮತ್ತೊಮ್ಮೆ ತಂಡದ ಪಾಲಿನ ಆಪತ್ಬಾಂಧವರಾಗಿ ಮಿಂಚಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ಜವಾಬ್ದಾರಿಯುತ ಆಟವಾಡಿದ ರಾಹುಲ್, ಅಮೋಘ ಶತಕ ಸಿಡಿಸುವ ಮೂಲಕ ಭಾರತ ತಂಡವು ಗೌರವಯುತ ಮೊತ್ತ ಕಲೆಹಾಕಲು ನೆರವಾದರು.
ಈ ಪಂದ್ಯದಲ್ಲಿ ಕಿವೀಸ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಭಾರತ ತಂಡ, ಪ್ರಮುಖ ಆಟಗಾರರಾದ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್‌ಗಳನ್ನು ಕಳೆದುಕೊಂಡು 118 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ತಮ್ಮ ನೆಚ್ಚಿನ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಾಹುಲ್, ತಂಡದ ಕುಸಿತವನ್ನು ತಡೆಯುವಲ್ಲಿ ಯಶಸ್ವಿಯಾದರು.
ಜವಾಬ್ದಾರಿಯುತ ಜೊತೆಯಾಟ ಮತ್ತು ಶತಕದ ವೈಭವ:
ಆರಂಭದಲ್ಲಿ ರವೀಂದ್ರ ಜಡೇಜಾ ಅವರೊಂದಿಗೆ ಸೇರಿ ೭೩ ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದ ರಾಹುಲ್, ಇನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಜಡೇಜಾ ನಿರ್ಗಮನದ ನಂತರ, ನಿತೀಶ್ ಕುಮಾರ್ ರೆಡ್ಡಿ ಅವರೊಂದಿಗೆ ಸೇರಿಕೊಂಡು 49 ಎಸೆತಗಳಲ್ಲಿ 57 ರನ್ ಸೇರಿಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಿದರು. ಒಂದು ಕಡೆ ವಿಕೆಟ್‌ಗಳು ಬೀಳುತ್ತಿದ್ದರೂ, ದೃತಿಗೆಡದ ರಾಹುಲ್ ಸ್ಟ್ರೈಕ್ ಬದಲಾಯಿಸುತ್ತಾ ಇನಿಂಗ್ಸ್ ವೇಗವನ್ನು ಹೆಚ್ಚಿಸಿದರು.
ಅಂತಿಮವಾಗಿ 49ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ರಾಹುಲ್ ತಮ್ಮ ವೃತ್ತಿಜೀವನದ 8ನೇ ಏಕದಿನ ಶತಕವನ್ನು ಪೂರೈಸಿದರು. ವಿಕೆಟ್ ಕೀಪರ್ ಬ್ಯಾಟರ್ ಆಗಿ ಇದು ಅವರ ಮೂರನೇ ಶತಕವಾಗಿದೆ. ಅವರ ಅಜೇಯ 112 ರನ್‌ಗಳ ಕೊಡುಗೆಯಿಂದಾಗಿ (11 ಬೌಂಡರಿ, 1 ಸಿಕ್ಸರ್) ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 8ವಿಕೆಟ್ ನಷ್ಟಕ್ಕೆ 284 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಲು ಸಾಧ್ಯವಾಯಿತು.
ಮಗಳು ಇವಾರಾಳಿಗೆ ಶತಕ ಅರ್ಪಣೆ:
ರಾಹುಲ್ ತಮ್ಮ ಶತಕವನ್ನು ಸಂಭ್ರಮಿಸಿದ ರೀತಿ ಮೈದಾನದಲ್ಲಿದ್ದ ಪ್ರೇಕ್ಷಕರ ಗಮನ ಸೆಳೆಯಿತು. ಹೆಲ್ಮೆಟ್ ಮತ್ತು ಎಡಗೈ ಗ್ಲೌಸ್ ತೆಗೆದ ರಾಹುಲ್, ಬಾಯಿಯ ಮೇಲೆ ಮೂರು ಬೆರಳಿಟ್ಟು ತಮ್ಮದೇ ಆದ ವಿಶಿಷ್ಟ ಶೈಲಿಯ ‘ವಿಸಿಲ್’ ಭಂಗಿಯಲ್ಲಿ ಸಂಭ್ರಮಿಸಿದರು. ಮಾರ್ಚ್ 2025 ರಲ್ಲಿ ಜನಿಸಿದ ತಮ್ಮ ಮಗಳು ‘ಇವಾರಾ’ಳಿಗೆ ಈ ಶತಕವನ್ನು ಅರ್ಪಿಸಿದ್ದು ವಿಶೇಷವಾಗಿತ್ತು. ಕಳೆದ ವರ್ಷ ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ರಾಹುಲ್ ಇದೇ ರೀತಿಯ ಸಂಭ್ರಮ ಆಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಗೌತಮ್ ಗಂಭೀರ್ ಮೆಚ್ಚುಗೆಯ ಮಹಾಪೂರ:
ರಾಹುಲ್ ಅವರ ಈ ಸಮಯೋಚಿತ ಆಟಕ್ಕೆ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಫಿದಾ ಆಗಿದ್ದಾರೆ. ಶತಕ ಬಾರಿಸಿ ಮೊಹಮ್ಮದ್ ಸಿರಾಜ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್‌ಗೆ ಮರಳುತ್ತಿದ್ದ ರಾಹುಲ್ ಅವರನ್ನು ಗಂಭೀರ್ ಆತ್ಮೀಯವಾಗಿ ಬರಮಾಡಿಕೊಂಡರು. ಮುಖದಲ್ಲಿ ಮಂದಹಾಸದೊಂದಿಗೆ ರಾಹುಲ್ ಬೆನ್ನು ತಟ್ಟಿ, ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದ್ದಕ್ಕಾಗಿ ಅಭಿನಂದಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುವ ಆಟಗಾರರಿಗೆ ರಾಹುಲ್ ಕಿವಿಮಾತು:
ಇತ್ತೀಚೆಗೆ ಸಾಮಾಜಿಕ ಜಾಲತಾಣದ ಸಂವಾದವೊಂದರಲ್ಲಿ ಯುವ ಕ್ರಿಕೆಟಿಗರಿಗೆ ಸಲಹೆ ನೀಡಿರುವ 33 ವರ್ಷದ ರಾಹುಲ್, “ಅವಕಾಶಗಳು ಕಡಿಮೆ ಇದ್ದಾಗ ತಾಳ್ಮೆಯಿಂದ ಕಾಯಬೇಕು ಮತ್ತು ಸಿಕ್ಕ ಅವಕಾಶಕ್ಕೆ ಸದಾ ಸಿದ್ಧರಾಗಿರಬೇಕು. ದೇಶೀಯ ಆಗಿರಲಿ ಅಥವಾ ಅಂತಾರಾಷ್ಟ್ರೀಯ ಪಂದ್ಯವಾಗಿರಲಿ, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಬೇಕು. ಕಠಿಣ ಪರಿಶ್ರಮ ಮತ್ತು ದೇವರ ಮೇಲಿನ ನಂಬಿಕೆ ನಮ್ಮನ್ನು ಕೈಬಿಡುವುದಿಲ್ಲ,” ಎಂದು ಹೇಳುವ ಮೂಲಕ ಕಿರಿಯ ಆಟಗಾರರಲ್ಲಿ ಸ್ಫೂರ್ತಿ ತುಂಬಿದ್ದಾರೆ.
ಒಟ್ಟಿನಲ್ಲಿ, ಟೀಕಾಕಾರರಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರಿಸುವ ಪರಿಪಾಠ ಬೆಳೆಸಿಕೊಂಡಿರುವ ಕೆ.ಎಲ್. ರಾಹುಲ್, ರಾಜ್‌ಕೋಟ್ ಅಂಗಳದಲ್ಲಿ ಮತ್ತೊಮ್ಮೆ ಭಾರತದ ‘ಮಿಸ್ಟರ್ ರಿಲಯಬಲ್’ (ಭರವಸೆಯ ಆಟಗಾರ) ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ; ಮೈದಾನದಲ್ಲಿ ಭಾರತದ ‘ಕೈ’ ಕೊಟ್ಟ ಅದೃಷ್ಟ : ರಾಜಕೋಟ್ ಸೋಲಿನ ಬೆನ್ನಲ್ಲೇ ಫೀಲ್ಡಿಂಗ್ ಬಗ್ಗೆ ಆತಂಕ!



















