ಕನ್ನಡಿಗ ಕೆ.ಎಲ್. ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡ ತೊರೆಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಇತ್ತೀಚೆಗೆ ಈ ಊಹಾಪೋಹಕ್ಕೆ ಫ್ರಾಂಚೈಸಿ ಮಾಲೀಕರು ತೆರೆ ಎಳೆದಿದ್ದರು. ಆದರೆ, ಈಗ ರಾಹುಲ್ ತಂಡದ ನಾಯಕತ್ವ ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಸದ್ಯದ ಮಾಹಿತಿಯಂತೆ ನಾಯಕತ್ವದಿಂದ ಕೆ.ಎಲ್. ರಾಹುಲ್ ಹಿಂದೆ ಸರಿಯುವುದು ಬಹುತೇಕ ಖಚಿತವಾಗಿದೆ. ಬುಧವಾರ ತಂಡದ ಮಾಲೀಕ ಸಂಜೀವ್ ಗೊಯೆಂಕಾ ನೀಡಿರುವ ಹೇಳಿಕೆ ಇದಕ್ಕೆ ದಾರಿ ಮಾಡಿಕೊಟ್ಟಿದೆ. 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಸಂಜೀವ್ ಗೊಯೆಂಕಾ ಸ್ಪಷ್ಟ ಉತ್ತರ ನೀಡದೇ ಜಾರಿಕೊಂಡಿದ್ದಾರೆ.
ಹೀಗಾಗಿ ರಾಹುಲ್ ರನ್ನು ನಾಯಕತ್ವದಲ್ಲಿ ಮುಂದುವರೆಸಲು ಅವರಿಗೆ ಇಷ್ಟವಿಲ್ಲ ಅನಿಸುತ್ತಿದೆ. ಬುಧವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಸುದ್ದಿಗೋಷ್ಠಿಯಲ್ಲಿ ಕೆಎಲ್ ರಾಹುಲ್ ಬಗ್ಗೆ ಪ್ರಶ್ನಿಸಲಾಗಿತ್ತು. ಆಗ ರಾಹುಲ್ ನಮ್ಮ ಕುಟುಂಬದ ಸದಸ್ಯರಿದ್ದಂತೆ. ನಮ್ಮ ತಂಡದ ಅವಿಭಾಜ್ಯ ಅಂಗ ಎಂದು ಹೇಳಿದ್ದರು. ಆದರೆ, ನಾಯಕತ್ವದ ಕುರಿತು ಮಾತ್ರ ಯಾವುದೇ ಖಚಿತ ಮಾಹಿತಿ ನೀಡಲಿಲ್ಲ. ಹೀಗಾಗಿ ರಾಹುಲ್ ನಾಯಕತ್ವದಿಂದ ಹಿಂದೆ ಸರಿಯಬಹುದು ಎಂಬ ಚರ್ಚೆ ಶುರುವಾಗಿದೆ.
ತಂಡದ ಮಾಲೀಕರು ನಾಯಕತ್ವದ ಬಗ್ಗೆ ನಿರ್ಧರಿಸಲು ಹಾಗೂ ರಿಟೈನ್ ಮಾಡಿಕೊಳ್ಳಲು ಇನ್ನೂ ಸಮಯವಿದೆ ಎಂದು ಉತ್ತರಿಸಿದ್ದಾರೆ. ಹೀಗಾಗಿ ಚರ್ಚೆ ಶುರುವಾಗಿದೆ.