ಬೆಂಗಳೂರು: ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿದ್ದಾಗ ಟೀಮ್ ಇಂಡಿಯಾದ ಆಟಗಾರರು ಕಡ್ಡಾಯವಾಗಿ ದೇಶಿ ಕ್ರಿಕೆಟ್ ಆಡಲೇಬೇಕೆಂಬ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ, ಮುಂಬರುವ ಪ್ರತಿಷ್ಠಿತ ವಿಜಯ್ ಹಜಾರೆ ಏಕದಿನ ಟೂರ್ನಿಗೆ ಕರ್ನಾಟಕ ರಾಜ್ಯ ತಂಡವು ಪ್ರಕಟಗೊಂಡಿದ್ದು, ತಂಡಕ್ಕೆ ತಾರಾ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ವೇಗಿ ಪ್ರಸಿದ್ಧ್ ಕೃಷ್ಣ ಅವರ ಸೇರ್ಪಡೆಯಾಗಿದೆ. ಡಿಸೆಂಬರ್ 24ರಿಂದ ಅಹಮದಾಬಾದ್‌ನಲ್ಲಿ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಅನುಭವಿ ಆರಂಭಿಕ ಬ್ಯಾಟರ್ ಮಯಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ.
ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟೀಮ್ ಇಂಡಿಯಾ ಎದುರಿಸಿದ ಹೀನಾಯ ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ಬಿಸಿಸಿಐ, ಆಟಗಾರರ ಆಯ್ಕೆ ಮಾನದಂಡ ಮತ್ತು ಫಿಟ್‌ನೆಸ್ ಕುರಿತು ಮಹತ್ವದ ಪರಾಮರ್ಶೆ ನಡೆಸಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕಾದರೆ ಆಟಗಾರರು ದೇಶಿ ಕ್ರಿಕೆಟ್‌ನ ಮೈದಾನದಲ್ಲಿ ಬೆವರು ಹರಿಸುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಮಂಡಳಿ ಬಂದಿದೆ. ಈ ಹಿನ್ನೆಲೆಯಲ್ಲಿ, ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದ ಕೆ.ಎಲ್. ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಅವರು ರಾಜ್ಯ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇವರಿಬ್ಬರ ಆಗಮನದಿಂದ ಕರ್ನಾಟಕ ತಂಡಕ್ಕೆ ಆನೆಬಲ ಬಂದಂತಾಗಿದೆ.
ತಂಡದಲ್ಲಿ ಸಮತೋಲನ
ರಾಜ್ಯ ಆಯ್ಕೆ ಸಮಿತಿಯು ತಂಡದ ಸಮತೋಲನಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಮಯಂಕ್ ಅಗರ್ವಾಲ್ ಅವರ ಸಾರಥ್ಯಕ್ಕೆ ಬೆಂಬಲವಾಗಿ ಅನುಭವಿ ಆಟಗಾರ ಕರುಣ್ ನಾಯರ್ ಅವರಿಗೆ ಉಪನಾಯಕನ ಜವಾಬ್ದಾರಿಯನ್ನು ವಹಿಸಿದೆ. ಬ್ಯಾಟಿಂಗ್ ವಿಭಾಗದಲ್ಲಿ ದೇವದತ್ತ ಪಡಿಕ್ಕಲ್, ಅಭಿನವ್ ಮನೋಹರ್ ಅವರಂತಹ ಸ್ಫೋಟಕ ಆಟಗಾರರಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಆರ್. ಸ್ಮರಣ್ ಮತ್ತು ಧ್ರುವ ಪ್ರಭಾಕರ್ ಅವರಂತಹ ಪ್ರತಿಭಾವಂತರು ಸ್ಥಾನ ಪಡೆದಿದ್ದಾರೆ. ವಿಕೆಟ್ ಕೀಪಿಂಗ್ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆ.ಎಲ್. ಶ್ರೀಜಿತ್ ಹಾಗೂ ಬಿ.ಆರ್. ಶರತ್ ಇಬ್ಬರಿಗೂ ಮಣೆ ಹಾಕಲಾಗಿದೆ. ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಕೃಷ್ಣ ಅವರ ಜೊತೆಗೆ ವೈಶಾಖ ವಿಜಯಕುಮಾರ್, ಶ್ರೇಯಸ್ ಗೋಪಾಲ್, ಮತ್ತು ಅಭಿಲಾಶ್ ಶೆಟ್ಟಿ ಎದುರಾಳಿಗಳನ್ನು ಕಟ್ಟಿಹಾಕಲು ಸಜ್ಜಾಗಿದ್ದಾರೆ.
ಎಲ್ಲ ತಂಡಗಳಲ್ಲಿ ಸ್ಟಾರ್ಗಳು
ಕೇವಲ ಕರ್ನಾಟಕವಷ್ಟೇ ಅಲ್ಲ, ಇಡೀ ವಿಜಯ್ ಹಜಾರೆ ಟೂರ್ನಿಯೇ ಈ ಬಾರಿ ತಾರಾ ಮೆರುಗು ಪಡೆದುಕೊಂಡಿದೆ. ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ತಮ್ಮ ರಾಜ್ಯ ತಂಡಗಳ ಪರ ಆಡಲು ಲಭ್ಯರಿರುವುದಾಗಿ ತಿಳಿಸಿದ್ದಾರೆ. ಇವರಲ್ಲದೆ ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಸೀಮಿತ ಓವರ್‌ಗಳ ಸ್ಪೆಷಲಿಸ್ಟ್‌ಗಳಿಗೂ ಕನಿಷ್ಠ ಎರಡು ಪಂದ್ಯಗಳನ್ನಾದರೂ ಆಡುವಂತೆ ಬಿಸಿಸಿಐ ಸೂಚನೆ ನೀಡಿದೆ. ಹೀಗಾಗಿ ಅಹಮದಾಬಾದ್‌ನ ಕ್ರೀಡಾಂಗಣಗಳು ಮಿನಿ ಟೀಮ್ ಇಂಡಿಯಾದ ಹೋರಾಟದಂತೆ ಭಾಸವಾಗಲಿವೆ. ಆದರೆ, ಶ್ರೇಯಸ್ ಅಯ್ಯರ್ ಅವರು ಇನ್ನೂ ಸಂಪೂರ್ಣ ಫಿಟ್‌ನೆಸ್ ಕಂಡುಕೊಳ್ಳದ ಕಾರಣ ಟೂರ್ನಿಗೆ
ಅಲಭ್ಯರಾಗುವ ಸಾಧ್ಯತೆಯಿದೆ.
ತಂಡದ ತರಬೇತಿ ಮತ್ತು ನಿರ್ವಹಣೆಗೆ ಕೆಎಸ್‌ಸಿಎ ಬಲಿಷ್ಠ ಪಡೆಯನ್ನೇ ನೇಮಿಸಿದೆ. ಮುಖ್ಯ ಕೋಚ್ ಆಗಿ ಕೆ. ಯರೇಗೌಡ ಕಾರ್ಯನಿರ್ವಹಿಸಲಿದ್ದು, ಬೌಲಿಂಗ್ ವಿಭಾಗದ ಉಸ್ತುವಾರಿಯನ್ನು ಮನ್ಸೂರ್ ಅಲಿ ಖಾನ್ ಹೊರಲಿದ್ದಾರೆ. ಫೀಲ್ಡಿಂಗ್ ಕೋಚ್ ಆಗಿ ಶಬರೀಶ್ ಮೋಹನ್, ಮ್ಯಾನೇಜರ್ ಆಗಿ ಪಿ.ವಿ. ಸುಮಂತ್ ತಂಡದ ಜೊತೆಗಿರಲಿದ್ದಾರೆ. ಆಟಗಾರರ ಫಿಟ್‌ನೆಸ್ ಕಾಪಾಡಲು ಸ್ಟ್ರೆಂಥ್ ಅಂಡ್ ಕಂಡಿಷನಿಂಗ್ ಕೋಚ್ ಇರ್ಫಾನುಲ್ಲಾ ಖಾನ್ ಹಾಗೂ ಫಿಸಿಯೋ ಅಭಿಷೇಕ್ ಕುಲಕರ್ಣಿ ಸೇರಿದಂತೆ ಸಂಪೂರ್ಣ ಸಹಾಯಕ ಸಿಬ್ಬಂದಿ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಒಟ್ಟಿನಲ್ಲಿ ಬಿಸಿಸಿಐನ ಹೊಸ ನಿಯಮದಿಂದಾಗಿ ದೇಶಿ ಕ್ರಿಕೆಟ್‌ಗೆ ಮತ್ತೆ ಗತವೈಭವ ಮರಳುವ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ: ಸಿಎಸ್‌ಕೆ ಹರಾಜು ರಹಸ್ಯ ‘ಲೀಕ್’ ಆರೋಪ: ಟ್ರೋಲಿಗರಿಗೆ ತಮ್ಮದೇ ಶೈಲಿಯಲ್ಲಿ ‘ದೂಸ್ರಾ’ ಎಸೆದ ಅಶ್ವಿನ್



















