ಭಾರತದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಭಾರತ ತಂಡಕ್ಕೆ ದೊಡ್ಡ ಆಘಾತವಾಗಿದೆ.
ಮೊದಲು ಟಾಸ್ ಗೆದ್ದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅವರ ನಿರ್ಧಾರ ತಪ್ಪು ಎಂಬುವುದು ಸಾಬೀತಾಯಿತು. ಪರಿಣಾಮ ಭಾರತ ತಂಡ ಕೇವಲ 46 ರನ್ ಗಳಿಗೆ ಸರ್ವ ಪತನ ಕಂಡಿತ್ತು. ನಂತರ ಬ್ಯಾಟ್ ಬೀಸಿದ ನ್ಯೂಜಿಲೆಂಡ್ ತಂಡ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶಿಸಿದರು.
ಡೆವೊನ್ ಕಾನ್ವೆ 91 ರನ್ ಗಳಿಸಿದರೆ, ರಚಿನ್ ರವೀಂದ್ರ 134 ರನ್ ಗಳಿಸಿದರು. ಪರಿಣಾಮ ನ್ಯೂಜಿಲೆಂಡ್ ತಂಡ ಪ್ರಥಮ ಇನ್ನಿಂಗ್ಸ್ ನಲ್ಲಿ 402 ರನ್ ಗಳಿಸಿತು. ಹೀಗಾಗಿ ಪ್ರಥಮ ಇನಿಂಗ್ಸ್ನಲ್ಲಿ 356 ರನ್ಗಳ ಹಿನ್ನಡೆ ಅನುಭವಿಸಿದ ಭಾರತ ತಂಡ ಬ್ಯಾಟಿಂಗ್ ಮುಂದುವರೆಸಿತು.
ಯಶಸ್ವಿ ಜೈಸ್ವಾಲ್ 35 ರನ್ ಬಾರಿಸಿದರೆ, ರೋಹಿತ್ ಶರ್ಮಾ (52) ಅರ್ಧಶತಕ ಸಿಡಿಸಿದರು. ವಿರಾಟ್ ಕೊಹ್ಲಿ 70 ರನ್ ಕಾಣಿಕೆ ನೀಡಿದರು.
ಸರ್ಫರಾಝ್ ಖಾನ್ 110 ಎಸೆತಗಳಲ್ಲಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅಲ್ಲದೆ 195 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 18 ಫೋರ್ಗಳೊಂದಿಗೆ 150 ರನ್ ಗಳಿಸಿದರು. ರಿಷಭ್ ಪಂತ್ 105 ಎಸೆತಗಳಲ್ಲಿ 99 ರನ್ ಗಳ ಕಾಣಿಕೆ ನೀಡಿದರು. ಪರಿಣಾಮ ಕೇವಲ ಒಂದೇ ಒಂದು ರನ್ ನಿಂದ ಶತಕ ವಂಚಿತರಾದರು. ಆದರೆ, ನಂತರ ಬಂದ ಆಟಗಾರರು ಹೆಚ್ಚು ಹೊತ್ತು ಕ್ರೀಜ್ ನಲ್ಲಿ ನಿಲ್ಲಲು ವಿಫಲರಾದರು. ಪರಿಣಾಮ ಭಾರತ ತಂಡ 462 ರನ್ ಗಳಿಸಿತು. ಹೀಗಾಗಿ ನ್ಯೂಜಿಲೆಂಡ್ ಗೆ 107 ರನ್ ಗಳ ಗುರಿ ಸಿಕ್ಕಿತು.
ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತ ಎದುರಿಸಿದರೂ ಕೊನೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ 2 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿ ಗೆಲುವಿನ ದಡ ಸೇರಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಝಿಲೆಂಡ್ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ಭಾರತ ತಂಡಕ್ಕೆ ಮುಂದಿನ ಪಂದ್ಯ ಗೆಲ್ಲುವ ಅವಶ್ಯಕತೆ ಇದೆ.