ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಟಿ20ಐ ನಾಯಕ, ‘ಮಿಸ್ಟರ್ 360 ಡಿಗ್ರಿ’ ಖ್ಯಾತಿಯ ಸೂರ್ಯಕುಮಾರ್ ಯಾದವ್ ಈಗ ಆಟದ ಕಾರಣಕ್ಕಲ್ಲದೆ ಬೇರೆಯದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟಿ ಹಾಗೂ ಮಾಡೆಲ್ ಖುಷಿ ಮುಖರ್ಜಿ ಅವರು ಸೂರ್ಯಕುಮಾರ್ ಬಗ್ಗೆ ನೀಡಿರುವ ಒಂದು ಹೇಳಿಕೆ ಈಗ ಇಡೀ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಸೂರ್ಯಕುಮಾರ್ ಅವರು ಈ ಹಿಂದೆ ತಮಗೆ ಪದೇ ಪದೇ ಮೆಸೇಜ್ ಮಾಡುತ್ತಿದ್ದರು ಎಂಬ ಆಘಾತಕಾರಿ ವಿಷಯವನ್ನು ಖುಷಿ ಬಹಿರಂಗಪಡಿಸಿದ್ದಾರೆ. ಈ ಹೇಳಿಕೆಯು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದರೆ, ಗಾಸಿಪ್ ಪ್ರಿಯರಿಗೆ ಹೊಸ ಆಹಾರ ಒದಗಿಸಿದೆ.
ನನ್ನ ಹಿಂದೆ ಬಹಳಷ್ಟು ಕ್ರಿಕೆಟಿಗರಿದ್ದಾರೆ: ಖುಷಿ ಮುಖರ್ಜಿ
‘ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ’ ನಂತಹ ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡಿರುವ ಖುಷಿ ಮುಖರ್ಜಿ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಬಾಂಬ್ ಸಿಡಿಸಿದ್ದಾರೆ. “ನನಗೆ ಯಾವುದೇ ಕ್ರಿಕೆಟಿಗನ ಜೊತೆ ಡೇಟಿಂಗ್ ಮಾಡುವ ಇಚ್ಛೆಯಿಲ್ಲ. ಆದರೆ ನನ್ನ ಹಿಂದೆ ಬಹಳಷ್ಟು ಕ್ರಿಕೆಟಿಗರಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಈ ಹಿಂದೆ ನನಗೆ ಬಹಳಷ್ಟು ಮೆಸೇಜ್ ಮಾಡುತ್ತಿದ್ದರು. ಆದರೆ ಈಗ ನಾವು ಹೆಚ್ಚು ಮಾತನಾಡುತ್ತಿಲ್ಲ. ನನ್ನ ಹೆಸರನ್ನು ಯವುದೇ ಕ್ರಿಕೆಟಿಗರ ಜೊತೆ ತಳಕು ಹಾಕುವುದಾಗಲಿ ಅಥವಾ ಲಿಂಕ್-ಅಪ್ ಮಾಡುವುದಾಗಲಿ ನನಗೆ ಇಷ್ಟವಿಲ್ಲ” ಎಂದು ಅವರು ‘ಕಿದ್ದಾನ್ ಎಂಟರ್ಟೈನ್‌ಮೆಂಟ್’ ಹಂಚಿಕೊಂಡಿರುವ ವಿಡಿಯೋದಲ್ಲಿ ನೇರವಾಗಿ ಹೇಳಿದ್ದಾರೆ. ತಮ್ಮನ್ನು ಕ್ರಿಕೆಟ್ ಪ್ರಪಂಚದ ನಂಟುಗಳಿಂದ ದೂರವಿಡಲು ಬಯಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ಆಕ್ರೋಶ ಮತ್ತು ‘ಪಬ್ಲಿಸಿಟಿ’ ಆರೋಪ
ಖುಷಿ ಮುಖರ್ಜಿ ಅವರ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಅವರ ಅಭಿಮಾನಿಗಳು ನಟಿಯ ವಿರುದ್ಧ ತಿರುಗಿಬಿದ್ದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು 2016 ರಿಂದ ದೇವಿಶಾ ಶೆಟ್ಟಿ ಅವರೊಂದಿಗೆ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಪುರಾವೆಗಳಿಲ್ಲದೆ ರಾಷ್ಟ್ರೀಯ ತಂಡದ ನಾಯಕನ ಹೆಸರನ್ನು ಪ್ರಸ್ತಾಪಿಸಿರುವುದು ಕೇವಲ ಪ್ರಚಾರಕ್ಕಾಗಿ (Fame Hungry) ಮಾಡುತ್ತಿರುವ ಗಿಮಿಕ್ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಸೂರ್ಯಕುಮಾರ್ ಅವರ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಇಂತಹ ಹೇಳಿಕೆ ನೀಡಲಾಗಿದೆ ಎಂಬುದು ಅಭಿಮಾನಿಗಳ ವಾದ. ಆದರೆ, ಈವರೆಗೆ ಸೂರ್ಯಕುಮಾರ್ ಆಗಲಿ ಅಥವಾ ಅವರ ಕುಟುಂಬದವರಾಗಲಿ ಈ ಆರೋಪಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಸೂರ್ಯಕುಮಾರ್ ಅವರ ವೈಯಕ್ತಿಕ ಜೀವನ ಮತ್ತು ಇತ್ತೀಚಿನ ನಡೆ
ಸೂರ್ಯಕುಮಾರ್ ಯಾದವ್ ಸದ್ಯ ಕ್ರೀಡಾಂಗಣದಲ್ಲಿ ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಅವರು ನಿರೀಕ್ಷಿತ ಫಾರ್ಮ್ ಹೊಂದಿಲ್ಲದ ಕಾರಣ ಟೀಕೆಗಳಿಗೆ ಗುರಿಯಾಗಿದ್ದರು. ಈ ನಡುವೆ, ಅವರು ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಇತ್ತೀಚೆಗೆ ವೈಕುಂಠ ಏಕಾದಶಿಯ ಅಂಗವಾಗಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಸ್ಥಾನದ ಭೇಟಿಯ ಫೋಟೋಗಳು ವೈರಲ್ ಆಗಿದ್ದವು. ಸೂರ್ಯಕುಮಾರ್ ಅವರು ತಮ್ಮ ಯಶಸ್ಸಿನ ಹಿಂದೆ ಪತ್ನಿ ದೇವಿಶಾ ಅವರ ಬೆಂಬಲ ದೊಡ್ಡದಿದೆ ಎಂದು ಯಾವಾಗಲೂ ಹೇಳಿಕೊಳ್ಳುತ್ತಾರೆ. ಇಂತಹ ಗಟ್ಟಿಯಾದ ದಾಂಪತ್ಯ ಹೊಂದಿರುವ ಆಟಗಾರನ ಬಗ್ಗೆ ಖುಷಿ ಮುಖರ್ಜಿ ಮಾಡಿರುವ ಈ ಅಚಾತುರ್ಯದ ಕಾಮೆಂಟ್ ಈಗ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ಖುಷಿ ಮುಖರ್ಜಿ ಅವರ ವೃತ್ತಿ ಬದುಕು
ಈ ವಿವಾದದ ಮೂಲಕ ಮುನ್ನೆಲೆಗೆ ಬಂದಿರುವ ಖುಷಿ ಮುಖರ್ಜಿ, ಕೇವಲ ರಿಯಾಲಿಟಿ ಶೋಗಳಿಗೆ ಸೀಮಿತವಾಗಿಲ್ಲ. 2013 ರಲ್ಲಿ ‘ಅಂಜಲ್ ತುರೈ’ ಎಂಬ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಅವರು, ನಂತರ ತೆಲುಗು ಮತ್ತು ಹಿಂದಿ ಭಾಷೆಯ ಪ್ರಾಜೆಕ್ಟ್‌ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಇವರು ತಮ್ಮ ಬೋಲ್ಡ್ ಲುಕ್‌ಗಳಿಂದಲೂ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಅನೇಕ ಸೆಲೆಬ್ರಿಟಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳು ಹೊರಬಂದ ಉದಾಹರಣೆಗಳಿವೆ, ಆದರೆ ಈಗ ಸದ್ಯದ ಟಿ20ಐ ನಾಯಕನನ್ನೇ ಗುರಿಯಾಗಿಸಿರುವುದು ಈ ಪ್ರಕರಣವನ್ನು ಹೆಚ್ಚು ಗಂಭೀರವಾಗಿಸಿದೆ.
ಇದನ್ನೂ ಓದಿ: ‘ಟಾಕ್ಸಿಕ್’ನಲ್ಲಿ ನಯನತಾರಾ ಫಸ್ಟ್ ಲುಕ್ ರಿವೀಲ್.. ‘ಗಂಗಾ’ವತಾರದಲ್ಲಿ ಮಿಂಚಿದ ಲೇಡಿ ಸೂಪರ್ ಸ್ಟಾರ್!



















