ಚೆನ್ನೈ: ಜನಪ್ರಿಯ ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಅವರನ್ನು ತಮಿಳುನಾಡು ಬಿಜೆಪಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ನೇಮಕ ಮಹತ್ವ ಪಡೆದಿದೆ. ಈ ನೇಮಕದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಖುಷ್ಬೂ, ತಮಿಳುನಾಡಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದು ಮತ್ತು ಮುಂಬರುವ ಚುನಾವಣೆಗಳಿಗೆ ಸಿದ್ಧತೆ ನಡೆಸುವುದು ತಮ್ಮ ಪ್ರಮುಖ ಆದ್ಯತೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಒಟ್ಟು 14 ಉಪಾಧ್ಯಕ್ಷರನ್ನು ಬಿಜೆಪಿ ನೇಮಕ ಮಾಡಿದ್ದು, ಖುಷ್ಬೂ ಸುಂದರ್ ಅವರೂ ಅವರಲ್ಲಿ ಒಬ್ಬರು. ಈ ಪ್ರಮುಖ ಜವಾಬ್ದಾರಿಗೆ ತಮ್ಮನ್ನು ಆಯ್ಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರಿಗೆ ಖುಷ್ಬೂ ಕೃತಜ್ಞತೆ ಸಲ್ಲಿಸಿದ್ದಾರೆ.
ದಕ್ಷಿಣ ಚೆನ್ನೈ ಮೇಲೆ ವಿಶೇಷ ಗಮನಹರಿಸಿ, ಕ್ಷೇತ್ರದಾದ್ಯಂತ ಬೂತ್ ಮಟ್ಟದಲ್ಲಿ ಪಕ್ಷದ ಅಸ್ತಿತ್ವವನ್ನು ಬಲಪಡಿಸುವುದು ತಮ್ಮ ತಕ್ಷಣದ ಗುರಿಯಾಗಿದೆ ಎಂದು ಖುಷ್ಬೂ ತಿಳಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ-ಮನೆಗೆ ತಲುಪಿಸುವ ಮೂಲಕ ಮತದಾರರೊಂದಿಗೆ ಸಂಪರ್ಕ ಸಾಧಿಸುವುದಾಗಿ ಅವರು ಹೇಳಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನೇಮಕವು ಮಹತ್ವದ್ದಾಗಿದೆ ಎಂದು ವಿಶ್ಲೇಷಿಸಲಾಗಿದೆ. ಖುಷ್ಬೂ ಅವರ ನೇಮಕವು ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಮತ್ತು ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ತಂತ್ರದ ಭಾಗವಾಗಿದೆ.
ಎನ್ಡಿಎ ಮೈತ್ರಿಗೆ ನಟ ವಿಜಯ್ಗೆ ಆಹ್ವಾನ
ಉಪಾಧ್ಯಕ್ಷ ಸ್ಥಾನಕ್ಕೇರುತ್ತಿದ್ದಂತೆಯೇ ಖುಷ್ಬೂ ಸುಂದರ್ ಅವರು ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ವಿಜಯ್ಗೆ ಎನ್ಡಿಎ ಮೈತ್ರಿ ಸೇರಿಕೊಳ್ಳುವಂತೆ ನೇರ ಆಹ್ವಾನ ನೀಡಿದ್ದಾರೆ. “ಡಿಎಂಕೆ ಪಕ್ಷವನ್ನು ಸೋಲಿಸುವುದೇ ನಮ್ಮೆಲ್ಲರ ಗುರಿಯಾಗಿದ್ದರೆ, ನಾವೆಲ್ಲರೂ ಒಟ್ಟಾಗಬೇಕು. ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟಕ್ಕೆ ಟಿವಿಕೆ ಸೇರ್ಪಡೆಯಾದರೆ ಅದು ಉತ್ತಮ ನಿರ್ಧಾರವಾಗಲಿದೆ” ಎಂದು ಅವರು ಹೇಳಿದ್ದಾರೆ. ವಿಜಯ್ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಬಿಜೆಪಿಯೊಳಗಿನ ಪ್ರಮುಖ ನಾಯಕರೊಂದಿಗೆ ಚರ್ಚಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನೊಂದೆಡೆ, ಡಿಎಂಕೆ ಜತೆಯಾಗಲೀ, ಬಿಜೆಪಿ ಜತೆಯಾಗಲೀ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಿಜಯ್ ಅವರು ಈ ಹಿಂದೆಯೇ ಘೋಷಿಸಿದ್ದರು.
ಖುಷ್ಬೂ ಅವರ ರಾಜಕೀಯ ಹಿನ್ನೆಲೆ
ಖುಷ್ಬೂ ಸುಂದರ್ ಅವರಿಗೆ ರಾಜಕೀಯ ಹೊಸದೇನಲ್ಲ. ಈ ಹಿಂದೆ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿದ್ದರು. ನಂತರ ಆ ಸ್ಥಾನಕ್ಕೆ ರಾಜೀನಾಮೆ ನೀಡಿ, 2021ರ ವಿಧಾನಸಭಾ ಚುನಾವಣೆಯಲ್ಲಿ ಅವರು ಥೌಸೆಂಡ್ ಲೈಟ್ಸ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈಗ, ಬಿಜೆಪಿಯ ಉಪಾಧ್ಯಕ್ಷೆಯಾಗಿ, ತಮಿಳುನಾಡಿನಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.



















