ನವದೆಹಲಿ : ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಮೇನಿ ಅವರ ಹತ್ಯೆಯ ಕುರಿತು ಕೇಂದ್ರ ಸರ್ಕಾರದ ಮೌನವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಈ ಸಂದರ್ಭದಲ್ಲಿ ಮೌನವಾಗಿರುವುದು ‘ತಟಸ್ಥ’ ನಿಲುವಲ್ಲ, ಬದಲಾಗಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ‘ಪಲಾಯನವಾದ’ ಎಂದು ಅವರು ಬಣ್ಣಿಸಿದ್ದಾರೆ.
ಆಂಗ್ಲ ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಇರಾನ್ ಮತ್ತು ಭಾರತದ ನಡುವಿನ ಐತಿಹಾಸಿಕ ಹಾಗೂ ಆಯಕಟ್ಟಿನ ಬಾಂಧವ್ಯವನ್ನು ಸ್ಮರಿಸಿದ್ದಾರೆ. ಅಲ್ಲದೆ, ಕಷ್ಟಕಾಲದಲ್ಲಿ ಇರಾನ್ ಭಾರತದ ನೆರವಿಗೆ ಧಾವಿಸಿದ್ದ ಹಲವು ಪ್ರಸಂಗಗಳನ್ನು ನೆನಪಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಖಮೇನಿ ಹತ್ಯೆಯಾಗಿರುವ ಬಗ್ಗೆ ಕೇಂದ್ರ ಸರ್ಕಾರ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಮಧ್ಯಪ್ರಾಚ್ಯದಲ್ಲಿ ಶಾಂತಿ ಕಾಪಾಡುವಂತೆ ಮತ್ತು ಉದ್ವಿಗ್ನತೆ ಕಡಿಮೆ ಮಾಡುವಂತೆ ಮಾತ್ರ ಮನವಿ ಮಾಡಿದೆ. ಇದನ್ನು ಕಟುವಾಗಿ ಟೀಕಿಸಿರುವ ಸೋನಿಯಾ ಗಾಂಧಿ, “ಶಾಂತಿ ಮಾತುಕತೆಗಳು ನಡೆಯುತ್ತಿರುವಾಗಲೇ ಒಂದು ದೇಶದ ಮುಖ್ಯಸ್ಥನನ್ನು ಹತ್ಯೆ ಮಾಡಿರುವುದು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿನ ದೊಡ್ಡ ಬಿರುಕನ್ನು ಎತ್ತಿ ತೋರಿಸುತ್ತಿದೆ. ಇಂಥದ್ದೊಂದು ಕೃತ್ಯಕ್ಕೆ ಭಾರತದ ಮೌನವು ಅಚ್ಚರಿಯದ್ದು” ಎಂದಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಆರಂಭದಲ್ಲಿ ಅಮೆರಿಕ-ಇಸ್ರೇಲ್ ದಾಳಿಯನ್ನು ಕಡೆಗಣಿಸಿ, ಯುಎಇ ಮೇಲೆ ಇರಾನ್ ನಡೆಸಿದ ಪ್ರತಿದಾಳಿಯನ್ನು ಮಾತ್ರ ಖಂಡಿಸಿದರು. ನಂತರ ‘ಸಂವಾದ ಮತ್ತು ರಾಜತಾಂತ್ರಿಕತೆ’ಯ ಬಗ್ಗೆ ಮಾತನಾಡಿದರು. ಆದರೆ ಅಮೆರಿಕ ಮತ್ತು ಇಸ್ರೇಲ್ ಪ್ರಚೋದನಕಾರಿಯಾಗಿ ನಡೆಸಿದ ದಾಳಿ ಬಗ್ಗೆ ಅವರು ತುಟಿ ಬಿಚ್ಚಲಿಲ್ಲವೇಕೆ?” ಎಂದು ಸೋನಿಯಾ ಪ್ರಶ್ನಿಸಿದ್ದಾರೆ. ಖಮೇನಿ ಹತ್ಯೆಗೂ ಕೇವಲ 48 ಗಂಟೆಗಳ ಮುಂಚೆ ಪ್ರಧಾನಿ ಮೋದಿ ಇಸ್ರೇಲ್‌ಗೆ ಭೇಟಿ ನೀಡಿ ಬೆಂಜಮಿನ್ ನೆತನ್ಯಾಹು ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ವಿಷಯದಲ್ಲಿ ಇರಾನ್ ಬೆಂಬಲದ ನೆನಪು
ತಮ್ಮ ಲೇಖನದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆಯಾಗಿರುವ ಸೋನಿಯಾ, “1994ರಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ಕೆಲವು ವಿಭಾಗಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಕಾಶ್ಮೀರದ ವಿಚಾರವಾಗಿ ಭಾರತದ ವಿರುದ್ಧ ನಿರ್ಣಯ ಮಂಡಿಸಲು ಯತ್ನಿಸಿದಾಗ, ಅದನ್ನು ತಡೆಯುವಲ್ಲಿ ಟೆಹ್ರಾನ್ ಪ್ರಮುಖ ಪಾತ್ರ ವಹಿಸಿತ್ತು. ಭಾರತದ ಆರ್ಥಿಕತೆಯ ಅತ್ಯಂತ ಸೂಕ್ಷ್ಮ ಘಟ್ಟದಲ್ಲಿ ಕಾಶ್ಮೀರ ವಿಷಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವುದನ್ನು ಇರಾನ್‌ನ ಆ ಮಧ್ಯಸ್ಥಿಕೆ ತಪ್ಪಿಸಿತ್ತು” ಎಂದು ಸ್ಮರಿಸಿದ್ದಾರೆ.
ಅಷ್ಟೇ ಅಲ್ಲದೆ, ಪಾಕಿಸ್ತಾನದ ಗಡಿಯ ಸಮೀಪವಿರುವ ಜಹೇದಾನ್‌ನಲ್ಲಿ ಭಾರತವು ತನ್ನ ರಾಜತಾಂತ್ರಿಕ ಕಚೇರಿ ತೆರೆಯಲು ಇರಾನ್ ಅವಕಾಶ ಮಾಡಿಕೊಟ್ಟಿತು. ಇದು ಗ್ವಾದರ್ ಬಂದರು ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಅಭಿವೃದ್ಧಿಗೆ ಪ್ರತಿಯಾಗಿ ಆಯಕಟ್ಟಿನ ಸಮತೋಲನ ಕಾಯ್ದುಕೊಳ್ಳಲು ಭಾರತಕ್ಕೆ ನೆರವಾಯಿತು ಎಂಬುದನ್ನು ಅವರು ಬೊಟ್ಟು ಮಾಡಿದ್ದಾರೆ.
ವಾಜಪೇಯಿ ನಿಲುವು ಮತ್ತು ‘ವಸುಧೈವ ಕುಟುಂಬಕಂ’
2001ರ ಏಪ್ರಿಲ್‌ನಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇರಾನ್‌ಗೆ ಅಧಿಕೃತ ಭೇಟಿ ನೀಡಿದಾಗ, ಭಾರತ ಮತ್ತು ಇರಾನ್ ನಡುವಿನ ಐತಿಹಾಸಿಕ ಹಾಗೂ ಸಮಕಾಲೀನ ಆಳವಾದ ಬಾಂಧವ್ಯವನ್ನು ಆತ್ಮೀಯವಾಗಿ ಪುನರುಚ್ಚರಿಸಿದ್ದರು. ಆದರೆ ಆ ದೀರ್ಘಕಾಲದ ಸಂಬಂಧಗಳು ಪ್ರಸ್ತುತ ಸರ್ಕಾರಕ್ಕೆ ಯಾವುದೇ ಪ್ರಸ್ತುತತೆ ಹೊಂದಿಲ್ಲದಂತೆ ಕಾಣುತ್ತಿದೆ ಎಂದು ಸೋನಿಯಾ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತವು ಇರಾನ್ ಮತ್ತು ಇಸ್ರೇಲ್ ಎರಡೂ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಶಾಂತಿ ಕಾಪಾಡುವಂತೆ ಮನವಿ ಮಾಡುವ ರಾಜತಾಂತ್ರಿಕ ಅವಕಾಶವನ್ನು ಹೊಂದಿದೆ. ಆದರೆ ಆ ಅವಕಾಶವು ವಿಶ್ವಾಸಾರ್ಹತೆಯ ಮೇಲೆ ನಿಂತಿದೆ. “ಭಾರತವು ‘ವಸುಧೈವ ಕುಟುಂಬಕಂ’ ಎಂಬ ಆದರ್ಶವನ್ನು ಪ್ರತಿಪಾದಿಸುತ್ತಾ ಬಂದಿದೆ. ಇದು ಕೇವಲ ಪ್ರದರ್ಶನದ ರಾಜತಾಂತ್ರಿಕತೆಯ ಘೋಷಣೆಯಾಗಬಾರದು. ನ್ಯಾಯ, ಸಂಯಮ ಮತ್ತು ಮಾತುಕತೆಗೆ ಬದ್ಧವಾಗಿರಬೇಕು. ನಿಯಮಾಧಾರಿತ ವ್ಯವಸ್ಥೆಯು ಕುಸಿಯುತ್ತಿರುವ ಇಂತಹ ಹೊತ್ತಿನಲ್ಲಿ ಮೌನ ವಹಿಸುವುದು ಜವಾಬ್ದಾರಿಯಿಂದ ನುಣುಚಿಕೊಂಡಂತೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು ಒಂದು ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ಹಿಂದಿನ ಹಲವು ಬಿಕ್ಕಟ್ಟುಗಳ ಸಂದರ್ಭದಲ್ಲಿ ಭಾರತವು ತನ್ನ ನಾಗರಿಕರನ್ನು ರಕ್ಷಿಸುವಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದೆಯೇ ಹೊರತು ಯಾರದೋ ಕೈಗೊಂಬೆಯಾಗಿ ಅಲ್ಲ ಎಂದು ಅವರು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ : ರಾಜ್ಯಸಭೆಯ ವಿಪಕ್ಷ ನಾಯಕನ ಸ್ಥಾನ ಉಳಿಸಿಕೊಳ್ಳಲು ‘ಕೈ’ ಕಸರತ್ತು | ಮಹಾರಾಷ್ಟ್ರದ ಏಕೈಕ ಸ್ಥಾನಕ್ಕಾಗಿ ಶಿವಸೇನೆಯೊಂದಿಗೆ ಚೌಕಾಸಿ


















