ಬೈಂದೂರು (ಉಡುಪಿ) : ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಉಪ್ಪುಂದ 2024-2025ರ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಶ್ರೀ ದುರ್ಗಾಪರಮೇಶ್ವರಿ ಸಭಾಭವನ ಉಪ್ಪುಂದದಲ್ಲಿ ನಡೆಯಿತು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿಯೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗುರುತಿಸಿಕೊಂಡಿರುವ ಉಪ್ಪುಂದದಲ್ಲಿ ಪ್ರಧಾನಕಛೇರಿ ಹೊಂದಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು 49ವರ್ಷಗಳನ್ನು ಪೂರೈಸಿದ್ದು ಸಂಭ್ರಮದ ವಿಚಾರ. 2024-25ನೇ ಸಾಲಿನ ವರದಿ ವರ್ಷದಲ್ಲಿ ರೂ. 1150 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಿ, ಸಂಘವು ಮತ್ತಷ್ಟು ಸದೃಢತೆಯಲ್ಲಿ ಮುನ್ನಡೆಸುತ್ತಿದೆ. ಹಾಗೂ ವರದಿ ವರ್ಷದಲ್ಲಿ 6ಕೋಟಿ 15ಲಕ್ಷ (6.15) ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ರಾಜ್ಯದ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿಯೇ ಪ್ರಪ್ರಥಮವಾಗಿ ಸಂಘದ ಮಾಲಕತ್ವದಲ್ಲಿ ಖರೀದಿಸಿದ ನಿವೇಶನದಲ್ಲಿ ವಿಶಿಷ್ಟ ವಿನ್ಯಾಸದ ‘ರೈತಸಿರಿ’ ಆಗ್ರಿ ಮೊಲ್ ಸರ್ವ ಸರಕಿನ ಮಳಿಗೆ ಇದರ ಕಟ್ಟಡ ಕಾಮಗಾರಿ ಬಗ್ಗೆ ಇ-ಟೆಂಡರ್‌ನಂತೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಕಾಮಗಾರಿಯು ಸೀಮಿತ ಅವಧಿಯೊಳಗೆ ಕಟ್ಟಡ ನಿರ್ಮಿಸಿ, ರೈತ ಸಹಕಾರಿ ನವೋದ್ಯಮ ಯೋಜನೆ ರೂಪಿಸಿದ್ದು ಸದಸ್ಯರಿಗೆ, ಗ್ರಾಹಕರಿಗೆ ಹೊಸತನದ ಸೇವೆ ಕಲ್ಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಖಂಬದಕೋಣೆ ಸೊಸೈಟಿ ದಿಟ್ಟ ನಿಲುವು: ಬಡ ಮತ್ತು ಮಧ್ಯಮ ವರ್ಗದ ಜನರ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ಸಹಕಾರ ನೀಡುವ ನಿಟ್ಟಿನಲ್ಲಿ ಕ್ಯಾನ್ಸರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವರ ಚಿಕಿತ್ಸೆಗೆ 3 ಲಕ್ಷದ ತನಕ ಉಚಿತ ಚಿಕಿತ್ಸೆ ನೀಡುವ ಸಲುವಾಗಿ ‘ಎಮ್.ಓ.ಐ.’ ಜೊತೆಗೆ ಸಹಭಾಗಿತ್ವ ಪಡೆಯಲು ಸಂಘ ಮಹತ್ವದ ನಿರ್ಧಾರ ಮಾಡಿದೆ. 100 ರೂ. ನೀಡಿ ಸದಸ್ಯತ್ವ ಪಡೆದರೆ ಚಿಕಿತ್ಸಾ ಅನುಕೂಲ ಪಡೆಯಬಹುದು ಎಂದರು.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರೈತರು, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಹಿರಿಯ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಂಜು ದೇವಾಡಿಗ, ನಿರ್ದೇಶಕರಾದ ಈಶ್ವರ್ ಹಕ್ಲತೋಡ್, ಮೋಹನ್ ಪೂಜಾರಿ, ಬಿ.ಎಸ್.ಸುರೇಶ್ ಶೆಟ್ಟಿ, ಗುರುರಾಜ ಹೆಬ್ಬಾರ್, ಭರತ್ ದೇವಾಡಿಗ, ಹೂವ ನಾಯ್ಕ್, ಪ್ರಕಾಶ್ ಎನ್.ಪೂಜಾರಿ, ರಾಜೇಶ್ ದೇವಾಡಿಗ, ಉದಯಕುಮಾರ್ ಶೆಟ್ಟಿ, ದಿನೀತಾ ಶೆಟ್ಟಿ, ಲೀಲಾ ಪೂಜಾರಿ, ಪದನಿಮಿತ್ತ ನಿರ್ದೇಶಕ ರಂಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಪ್ರಬಂಧಕ ಚಂದಯ್ಯ ಶೆಟ್ಟಿ ವಂದಿಸಿದರು.




















