ವಯನಾಡ್: ಕೇರಳ ರಾಜ್ಯದ ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 200ಕ್ಕೆ ತಲುಪಿದೆ ಎಂದು ವರದಿಗಳು ಹೇಳಿವೆ.
ಸದ್ಯದ ಮಾಹಿತಿಯಂತೆ ಸಾವನ್ನಪ್ಪಿದವರ ಸಂಖ್ಯೆ 200 ಕ್ಕೆ ತಲುಪಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಈ ಕುರಿತು ಮಾಹಿತಿ ನೀಡಿ, ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. 79 ಪುರುಷರು ಮತ್ತು 64 ಮಹಿಳೆಯರು ಸೇರಿದಂತೆ 144 ಮೃತದೇಹಗಳು ಇಲ್ಲಿಯವರೆಗೆ ಪತ್ತೆಯಾಗಿವೆ. 191 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಎರಡು ದಿನಗಳಲ್ಲಿ 1592 ಜನರನ್ನು ರಕ್ಷಿಸಲಾಗಿದೆ. ಇನ್ನೂ ಹೆಚ್ಚಿನ ಜನರನ್ನು ಸುರಕ್ಷಿತವಾಗಿ ಹೊರತೆಗೆಯುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಭೂಕುಸಿತದಲ್ಲಿ ಸಿಲುಕಿರುವ 1386 ಜನರನ್ನು ರಕ್ಷಿಸಲಾಗಿದೆ ಮತ್ತು ಏಳು ಶಿಬಿರಗಳಿಗೆ ಅವರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ವಯನಾಡ್ ಜಿಲ್ಲೆಯಾದ್ಯಂತ ಒಟ್ಟು 8017 ಜನರನ್ನು ಪ್ರಸ್ತುತ 82 ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. ಇದರಲ್ಲಿ 19 ಗರ್ಭಿಣಿಯರು ಸೇರಿದ್ದಾರೆ. ಮೆಪ್ಪಾಡಿಯಲ್ಲಿ 8 ಶಿಬಿರಗಳಲ್ಲಿ 421 ಕುಟುಂಬಗಳ 1486 ಜನ ಇದ್ದಾರೆ. ಮೂರು ಎನ್ ಡಿಆರ್ ಎಫ್ ತಂಡಗಳು ಸದ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಮದ್ರಾಸ್ ರೆಜಿಮೆಂಟ್ ಮತ್ತು ಡಿಫೆನ್ಸ್ ಸರ್ವೀಸ್ ಕಾರ್ಪ್ಸ್ ಸಹ ರಕ್ಷಣಾ ಪ್ರಯತ್ನಗಳನ್ನು ಕೈಗೊಳ್ಳಲು ಡಿಂಗಿ ದೋಣಿಗಳು ಮತ್ತು ತೆಪ್ಪಗಳನ್ನು ಬಳಸುತ್ತಿವೆ.