ತಿರುವನಂತಪುರಂ: ಇಬ್ಬರು ಯುವಕರನ್ನು ಮನೆಗೆ ಆಹ್ವಾನಿಸಿ, ಪೆಪ್ಪರ್ ಸ್ಪ್ರೇ ಬಳಸಿ, ಅವರ ದೇಹ ಮತ್ತು ಖಾಸಗಿ ಭಾಗಗಳಿಗೆ ಸ್ಟೇಪಲ್ ಪಿನ್ ಹೊಡೆದು ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ದಂಪತಿಯನ್ನು ಬಂಧಿಸಲಾಗಿದೆ.
ಕೊಯಿಪುರಂ ಬಳಿಯ ಚಾರಳಕುನ್ನು ನಿವಾಸಿಗಳಾದ ಜಯೇಶ್ ಮತ್ತು ಅವರ ಪತ್ನಿ ರೇಷ್ಮಿ ಬಂಧಿತ ಆರೋಪಿಗಳು. ಈ ದಂಪತಿ ಆಲಪ್ಪುಳದ ನೀಲಂಪೆರೂರು ಮೂಲದ ಯುವಕನಿಗೆ ಸೆ.1 ರಂದು ಮತ್ತು ಪತ್ತನಂತಿಟ್ಟದ ರಾನ್ನಿ ಮೂಲದ ಮತ್ತೊಬ್ಬ ಯುವಕನಿಗೆ ಸೆ.5 ರಂದು ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಯಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, ನೀಲಂಪೆರೂರಿನ 19 ವರ್ಷದ ಮೊದಲ ಸಂತ್ರಸ್ತನನ್ನು ಕಟ್ಟಿಹಾಕಿ, ಕಠಾರಿಯಿಂದ ಬೆದರಿಸಿ, ಕಬ್ಬಿಣದ ರಾಡಿನಿಂದ ಥಳಿಸಿ, ಸೈಕಲ್ ಚೈನ್ ಮತ್ತು ಕಟಿಂಗ್ ಪ್ಲೇಯರ್‌ನಿಂದ ಹಲ್ಲೆ ಮಾಡಲಾಗಿದೆ. ಆತನ ಎರಡೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡ ದಂಪತಿ, ನಂತರ ಆ ಯುವಕನ ಜನನಾಂಗಗಳಿಗೆ ಪೆಪ್ಪರ್ ಸ್ಪ್ರೇ ಹಾಕಿ, ಪರ್ಸ್‌ನಲ್ಲಿದ್ದ 19,000 ರೂ.ಗಳನ್ನು ದೋಚಿ, ಘಟನೆಯನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿ ಆಟೋ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗಿದೆ.
ಇದಾದ ಬಳಿಕ ಸೆ.5ರಂದು, ಜಯೇಶ್ ಜೊತೆ ಈ ಹಿಂದೆ ಕೆಲಸ ಮಾಡಿದ್ದ ಎರಡನೇ ಸಂತ್ರಸ್ತನ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ, ಜನನಾಂಗ ಸೇರಿದಂತೆ ದೇಹದ 23 ಕಡೆಗಳಲ್ಲಿ ಸ್ಟೇಪಲ್ಸ್ ಪಿನ್ ಹೊಡೆಯಲಾಗಿದೆ. ನಂತರ ಆತನಿಂದ ಹಣ ಮತ್ತು ಮೊಬೈಲ್ ಫೋನ್ ದೋಚಿ, ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಸಂತ್ರಸ್ತರಲ್ಲೊಬ್ಬರು ಆಸ್ಪತ್ರೆಗೆ ದಾಖಲಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. “ಆರಂಭದಲ್ಲಿ, ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆತ ಸುಳ್ಳು ಹೇಳಿದ್ದ. ಆದರೆ, ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಈ ಚಿತ್ರಹಿಂಸೆಯ ಹಿಂದೆ ಜಯೇಶ್ ಮತ್ತು ರೇಷ್ಮಿ ಇರುವುದಾಗಿ ಆತ ಬಹಿರಂಗಪಡಿಸಿದ,” ಎಂದು ಅರನ್ಮುಳ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ದಂಪತಿ ಇನ್ನಷ್ಟು ಮಂದಿಯನ್ನು ಈ ರೀತಿ ಗುರಿಯಾಗಿಸಿಕೊಂಡಿದ್ದರೋ ಎಂಬ ಬಗ್ಗೆ ಅನುಮಾನವಿದ್ದು ಆ ನಿಟ್ಟಿನಲ್ಲಿಯೂ ತನಿಖೆ ಮಾಡಲಾಗುತ್ತಿದೆ. “ಸಂತ್ರಸ್ತರಲ್ಲೊಬ್ಬರು ವಾಮಾಚಾರದ ಭಾಗವಾಗಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ, ಆದರೆ ಇದನ್ನು ಪರಿಶೀಲಿಸಬೇಕಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ, ರೇಷ್ಮಿಯು ಈ ಇಬ್ಬರು ಸಂತ್ರಸ್ತ ಯುವಕರೊಂದಿಗೂ ಅಕ್ರಮ ಸಂಬಂಧ ಹೊಂದಿದ್ದಳು. ಆಕೆ ಅವರೊಂದಿಗೆ ಮಾಡಿದ್ದ ವಾಟ್ಸ್ ಆ್ಯಪ್ ಚಾಟ್‌ಗಳನ್ನು ನೋಡಿದ ನಂತರ ಕೋಪಗೊಂಡ ಪತಿ ಜಯೇಶ್, ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿ, ಅದಕ್ಕೆ ರೇಷ್ಮಿಯನ್ನೂ ಬಳಸಿಕೊಂಡಿರುವ ಶಂಕೆಯೂ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂತ್ರಸ್ತರ ಹೇಳಿಕೆ
ರಾನ್ನಿಯ 29 ವರ್ಷದ ಸಂತ್ರಸ್ತ, “ಓಣಂ ದಿನದಂದು ಜಯೇಶ್ ನನ್ನನ್ನು ತನ್ನ ಮನೆಗೆ ಆಚರಣೆಗೆ ಬರುವಂತೆ ಹೇಳಿದ್ದ. ನಾನು ಅವನ ಮನೆಗೆ ತಲುಪಿದಾಗ, ಏಕಾಏಕಿ ಜಯೇಶ್ ನನ್ನ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಥಳಿಸಲು ಆರಂಭಿಸಿದ,” ಎಂದು ಪೊಲೀಸರಿಗೆ ತಿಳಿಸಿದ್ದಾನೆ. “ನಂತರ ನನ್ನ ಎರಡೂ ಕೈಗಳನ್ನು ಕಟ್ಟಿ, ಮರದ ಕೋಲಿಗೆ ನೇತುಹಾಕಲಾಯಿತು. ರೇಷ್ಮಿ ಕಬ್ಬಿಣದ ರಾಡ್ ಸೇರಿದಂತೆ ವಿವಿಧ ವಸ್ತುಗಳಿಂದ ನನ್ನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದಳು,” ಎಂದು ಆತ ಹೇಳಿದ್ದಾನೆ. ರೇಷ್ಮಿ ಚಿತ್ರಹಿಂಸೆ ನೀಡುತ್ತಿದ್ದಾಗ ಜಯೇಶ್ ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ರಾತ್ರಿ 8 ಗಂಟೆ ಸುಮಾರಿಗೆ ದಂಪತಿ ನನ್ನನ್ನು ಸ್ಕೂಟರ್‌ನಲ್ಲಿ ಕರೆದೊಯ್ದು ಪುತುಮೋನ್ ಎಂಬ ಸ್ಥಳದಲ್ಲಿ ಬಿಟ್ಟುಹೋದರು ಎಂದು ಸಂತ್ರಸ್ತ ತಿಳಿಸಿದ್ದಾನೆ. ಸದ್ಯ ಬಂಧಿತ ದಂಪತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



















