ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿಗೆ ಸಿಕ್ಕಿರುವ ಮತ್ತೊಂದು ಹೊಸ ಅಸ್ತ್ರವೆಂದರೆ ಯಮುನಾ ನದಿ! ನಾವು ಅಧಿಕಾರಕ್ಕೇರಿದರೆ ಯಮುನೆಯನ್ನು ಸ್ವಚ್ಛಗೊಳಿಸುತ್ತೇವೆ ಎಂದಿದ್ದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಈಗ ಬಿಜೆಪಿ ಯುಮನಾ ನದಿಯ ಮೂಲಕವೇ ಟಾಂಗ್ ನೀಡಿದೆ.
ನವದೆಹಲಿಯಲ್ಲಿ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು ಶನಿವಾರ ಕೇಜ್ರಿವಾಲ್ ಅವರ ದೊಡ್ಡ ಕಟೌಟ್ ಅನ್ನು ಯಮುನಾ ನದಿಗೆ ಹೊತ್ತೊಯ್ದು, “ಪುಣ್ಯ” ಸ್ನಾನ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶನಿವಾರ ಮುಂಜಾನೆಯೇ ಪರ್ವೇಶ್ ವರ್ಮಾ ಅವರು ತಮ್ಮ ಪಕ್ಷದ ಇತರೆ ನಾಯಕರೊಂದಿಗೆ ದೋಣಿಯ ಮೂಲಕ ಯಮುನಾ ನದಿಗೆ ತೆರಳಿ, ಅಲ್ಲಿ ನೆರೆದಿದ್ದ ಮಾಧ್ಯಮಗಳ ಮುಂದೆಯೇ ಕೇಜ್ರಿವಾಲ್ ಕಟೌಟ್ ಅನ್ನು ಹಲವು ಬಾರಿ ನದಿಯಲ್ಲಿ ಮುಳುಗಿಸಿ ತೆಗೆದಿದ್ದಾರೆ. ಆ ಕಟೌಟ್ ನಲ್ಲಿ ಕೇಜ್ರಿವಾಲ್ ಅವರು ತಮ್ಮ ಎರಡೂ ಕಿವಿಗಳ ಮೇಲೆ ಕೈಯಿಟ್ಟುಕೊಂಡಿರುವಂತೆ ಚಿತ್ರಿಸಲಾಗಿದೆ. ಜೊತೆಗೆ, ಅದರ ಕೆಳಗೆ, “ನಾನು ಫೇಲ್ ಆಗಿಬಿಟ್ಟೆ. ನನಗೆ ಮತ ಹಾಕಬೇಡಿ. 2025 ಆದರೂ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ನನ್ನಿಂದ ಆಗಲಿಲ್ಲ” ಎಂದು ಬರೆಯಲಾಗಿದೆ.
“ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗಂಗಾ ನದಿಯನ್ನು ಸ್ವಚ್ಛಗೊಳಿಸಿದ್ದಾರೆ. ಹೀಗಾಗಿ ಈಗ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕೋಟ್ಯಂತರ ಮಂದಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಸಾಧ್ಯವಾಗಿದೆ. ಸ್ವತಃ ಯೋಗಿ ಆದಿತ್ಯನಾಥ್ ಅವರೂ ಗಂಗೆಯಲ್ಲಿ ಮಿಂದೆದ್ದಿದ್ದಾರೆ. ಕೇಜ್ರಿವಾಲ್ ಅವರೇ, ಅದೇ ರೀತಿ ಯಮುನಾ ನದಿಯಲ್ಲಿ ಮಿಂದೇಳುವ ಧೈರ್ಯ ನಿಮಗಿದೆಯೇ” ಎಂದು ಶುಕ್ರವಾರವಷ್ಟೇ ಆಪ್‌ಗೆ ಬಿಜೆಪಿ ಸವಾಲು ಹಾಕಿತ್ತು.
ಶನಿವಾರ ಕೇಜ್ರಿ ಕಟೌಟ್ ಅನ್ನು ಯಮುನೆಯಲ್ಲಿ ಮುಳುಗಿಸಿ ಬಂದ ಬಳಿಕ ಮಾತನಾಡಿದ ಪರ್ವೇಶ್ ವರ್ಮಾ, “ಯಮುನಾ ಮಾತೆಯ ನೀರನ್ನು ಸ್ವಚ್ಛಗೊಳಿಸಲು ನಮ್ಮಿಂದ ಸಾಧ್ಯವಿದೆ. ಅದೇನೂ ರಾಕೆಟ್ ವಿಜ್ಞಾನ ಅಲ್ಲ. ಯಂತ್ರಗಳ ಮೂಲಕ ಮೊದಲು ಎಲ್ಲ ಕೆಸರು, ತ್ಯಾಜ್ಯವನ್ನು ಹೊರ ತೆಗೆಯಬೇಕು. ನಂತರ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಸಬರಮತಿ ನದಿಯನ್ನು ಸ್ವಚ್ಛಗೊಳಿಸಿದಂತೆ, ನಾವು ಯಮುನೆಯನ್ನು ಸ್ವಚ್ಛಗೊಳಿಸುತ್ತೇವೆ. ಆದರೆ, 11 ವರ್ಷಗಳ ಕಾಲ ಕೇಜ್ರಿವಾಲ್ ಸರ್ಕಾರ ಏನನ್ನೂ ಮಾಡಲಿಲ್ಲ” ಎಂದು ಆರೋಪಿಸಿದು.
ಹಲವು ವರ್ಷಗಳಿಂದಲೂ ವಿಪರೀತ ಮಲಿನಗೊಂಡಿರುವ ಯಮುನಾ ನದಿಯನ್ನು 2025ರೊಳಗಾಗಿ ಸ್ವಚ್ಛಗೊಳಿಸುವುದಾಗಿ ಆಮ್ ಆದ್ಮಿ ಪಕ್ಷ ಹಿಂದಿನ ಎರಡೂ ಚುನಾವಣೆಯಲ್ಲಿ ಆಶ್ವಾಸನೆ ನೀಡಿತ್ತು.