ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾರೆ. ಕಂಬಿಗಳ ಹಿಂದೆ ಕುಳಿತು ಪಶ್ಚಾತ್ತಾಪ ಪಡುತ್ತಿದ್ದಾರೆ. ಈ ಮಧ್ಯೆ ಅವರು ಅಭಿನಯಿಸಿದ್ದ ‘ಕಾಟೇರ’ ಸಿನಿಮಾ ಫಿಲ್ಮ್ ಫೇರ್ ಪ್ರಶಸ್ತಿಗಳ ಲಿಸ್ಟ್ ಗೆ ಬಂದು ನಿಂತಿತ್ತು. ಈ ಗೆಲುವಾದರೂ ದರ್ಶನ್ ಗೆ ಸಿಹಿ ನೀಡಲಿ ಎಂದು ಅವರ ಅಭಿಮಾನಿಗಳು ಭಾವಿಸಿದ್ದರು. ಆದರೆ, ದರ್ಶನ್ ಗೆ ಅಲ್ಲಿಯೂ ಮುಖಭಂಗವಾಗಿದೆ.
ಕಾಟೇರ್ ಅಭಿಮಾನಿಗಳ ಮನಸ್ಸು ಗೆದ್ದ ಚಿತ್ರ. ದರ್ಶನ್ ನಟಿಸಿದ್ದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು. 2024ನೇ ಸಾಲಿನ ‘ಫಿಲ್ಮ್ಫೇರ್ ಸೌತ್’ ನಲ್ಲಿ ಅವರ ಚಿತ್ರ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿ ಸುತ್ತಿಗೆ ಬಂದು ನಿಂತಿತ್ತು. ಆದರೆ, ಚಿತ್ರಕ್ಕೆ ಒಂದೇ ಒಂದು ಅವಾರ್ಡ್ ಕೂಡ ಸಿಕ್ಕಿಲ್ಲ. ಇದು ಕೂಡ ದರ್ಶನ್ ಅವರಿಗೆ ಕಹಿ ನೀಡಿದಂತಾಗಿದೆ.
ಅತ್ಯುತ್ತಮ ನಟ’, ‘ಅತ್ಯುತ್ತಮ ಸಿನಿಮಾ’, ‘ಅತ್ಯುತ್ತಮ ನಿರ್ದೇಶನ’ ಸೇರಿದಂತೆ ಒಟ್ಟು 7 ವಿಭಾಗಗಳಲ್ಲಿ ‘ಕಾಟೇರ’ ನಾಮ ನಿರ್ದೇಶನಗೊಂಡಿತ್ತು. ಆದರೆ, ಒಂದೇ ಒಂದು ವಿಭಾಗದಲ್ಲಿಯೂ ಪ್ರಶಸ್ತಿ ಸಿಕ್ಕಿಲ್ಲ. ಇದು ದರ್ಶನ್ ಆತಂಕಕ್ಕೆ ಕಾರಣವಾಗಿದೆ. ನಾನು ಸೋತು, ಚಿತ್ರವೂ ಸೋತಿತು ಎಂಬ ಭಾವ ಅವರಲ್ಲಿ ಮೂಡಿರಬಹುದು. ಚಿತ್ರರಂಗ ಯಾವ ರೀತಿ ಕಾಣುತ್ತಿದೆ ಎಂಬ ನೋವು ಹಾಗೂ ಸಂಶಯ ಕೂಡ ದರ್ಶನ್ ಮನದಲ್ಲಿ ಮೂಡುವಂತೆ ಈ ಪ್ರಸಂಗ ಮಾಡಿರಬಹುದು ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.
‘ಕಾಟೇರ’ ಸಿನಿಮಾದಲ್ಲಿ ದರ್ಶನ್ ಉತ್ತಮವಾಗಿ ನಟಿಸಿದ್ದರು. ಹೀಗಾಗಿ ಅತ್ಯುತ್ತಮ ನಟ ಅವಾರ್ಡ್ ಬರಬಹುದು ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಈ ಅವಾರ್ಡ್ ನಟ ರಕ್ಷಿತ್ ಶೆಟ್ಟಿ ಪಾಲಾಗಿದೆ. ಅತ್ಯುತ್ತಮ ಸಿನಿಮಾ ಅವಾರ್ಡ್ ‘ಡೇರ್ ಡೆವಿಲ್ ಮುಸ್ತಫಾ’ ಪಾಲಾಗಿದೆ. ಅತ್ಯುತ್ತಮ ನಿರ್ದೇಶನ ಅವಾರ್ಡ್ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಿರ್ದೇಶಕ ಹೇಮಂತ್ ರಾವ್ ಗೆ ಸಿಕ್ಕಿದೆ. ಈ ಸಂದರ್ಭದಲ್ಲಿಯೇ ದರ್ಶನ್ ಹಿಂದೆ ಅವಾರ್ಡ್ ಗಳ ಬಗ್ಗೆ ಹೇಳಿದ್ದ ಡೈಲಾಗ್ ಕೂಡ ಈಗ ವೈರಲ್ ಆಗುತ್ತಿದೆ. ಪ್ರಶಸ್ತಿಗಳು ಕೊಡೋದಲ್ಲ, ದುಡ್ಡು ಕೊಟ್ಟು ಖರೀದಿ ಮಾಡಬೇಕು ಎಂದು ಅವರು ಹೇಳಿದ್ದ ಡೈಲಾಗ್ ವೈರಲ್ ಆಗುತ್ತಿದೆ. ಈಗ ಅವರ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆಯನ್ನು ವೈರಲ್ ಮಾಡುತ್ತಿದ್ದಾರೆ.