ಜಮ್ಮು: ಬರೋಬ್ಬರಿ 35 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತ ನರ್ಸ್ ಸರಳಾ ಭಟ್ ಅವರ ಬರ್ಬರ ಹತ್ಯೆ ಪ್ರಕರಣ ಈಗ ಮತ್ತೆ ರೀಓಪನ್ ಆಗಿದೆ. ಜಮ್ಮು-ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ಇದೀಗ ಪ್ರಕರಣದ ಮರುತನಿಖೆ ಆರಂಭಿಸಿದೆ. ಈ ತನಿಖೆಯ ಭಾಗವಾಗಿ, ಇಂದು ಬೆಳಗ್ಗೆಯೇ ನಿಷೇಧಿತ ಜಮ್ಮು ಕಾಶ್ಮೀರ್ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಸಂಘಟನೆಯೊಂದಿಗೆ ನಂಟು ಹೊಂದಿದ್ದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಕಾಶ್ಮೀರದ ಹಲವೆಡೆ ಎಸ್ಐಎ ದಾಳಿ ನಡೆಸಿದೆ. 1990ರ ದಶಕದ ಆರಂಭದಲ್ಲಿದ್ದ ಪ್ರಕ್ಷುಬ್ಧ ಅವಧಿಯ ಬಗೆಹರಿಯದ ಪ್ರಕರಣಗಳನ್ನು ಪರಿಹರಿಸುವ ವ್ಯಾಪಕ ಪ್ರಯತ್ನದ ಭಾಗವಾಗಿ ಈ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ.
ಶ್ರೀನಗರದ ಸುಮಾರು ಎಂಟು ಸ್ಥಳಗಳಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ. ಜೆಕೆಎಲ್ಎಫ್ ಮಾಜಿ ಮುಖ್ಯಸ್ಥ ಯಾಸಿನ್ ಮಲಿಕ್‌ನ ಮೈಸುಮಾ ಪ್ರದೇಶದಲ್ಲಿರುವ ನಿವಾಸ ಮತ್ತು ‘ಏರ್ ಮಾರ್ಷಲ್’ ಎಂದೇ ಕರೆಯಲ್ಪಡುವ ಮತ್ತೊಬ್ಬ ಮಾಜಿ ಜೆಕೆಎಲ್ಎಫ್ ಮುಖಂಡ ಪೀರ್ ನೂರುಲ್ ಹಖ್ ಷಾ ಅವರ ಮನೆಗಳ ಮೇಲೂ ದಾಳಿ ನಡೆದಿವೆ.
ಯಾಸಿನ್ ಮಲಿಕ್ ಪ್ರಸ್ತುತ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಈತ ಮಾತ್ರವಲ್ಲದೆ, ಜೆಕೆಎಲ್ಎಫ್ ಮಾಜಿ ಕಮಾಂಡರ್‌ಗಳು,ಕಾರ್ಯಕರ್ತರಾದ ಜಾವೇದ್ ಅಹ್ಮದ್ ಮೀರ್, ಅಬ್ದುಲ್ ಹಮೀದ್ ಶೇಖ್, ಬಶೀರ್ ಅಹ್ಮದ್ ಗೊಜ್ರಿ ಸೇರಿದಂತೆ ಹಲವರ ನಿವಾಸಗಳನ್ನು ಶೋಧಿಸಲಾಗಿದೆ.

ಏನಿದು ಸರಳಾ ಭಟ್ ಹತ್ಯೆ ಪ್ರಕರಣ?
ಸರಳಾ ಭಟ್ ಅವರು ಶ್ರೀನಗರದ ಸೌರಾ ಪ್ರದೇಶದಲ್ಲಿರುವ ಶೇರ್-ಎ-ಕಾಶ್ಮೀರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (SKIMS) ನಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಏಪ್ರಿಲ್ 1990ರಲ್ಲಿ, ಅವರನ್ನು ಅವರ ಹಾಸ್ಟೆಲ್‌ನಿಂದ ಅಪಹರಿಸಲಾಯಿತು. ಕೆಲವು ದಿನಗಳ ನಂತರ, ಅವರ ಮೃತದೇಹ ಶ್ರೀನಗರದ ಡೌನ್ ಟೌನ್ ಪ್ರದೇಶದಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯು, ಅವರನ್ನು ಹಲವು ದಿನಗಳ ಕಾಲ ಹಿಂಸಿಸಿ, ಸಾಮೂಹಿಕ ಅತ್ಯಾಚಾರಗೈದು, ಗುಂಡಿಕ್ಕಿ ಕೊಲ್ಲಲಾಗಿದೆ ಎಂಬುದನ್ನು ದೃಢಪಡಿಸಿತ್ತು. ಈ ಭೀಕರ ಕೃತ್ಯದ ಹಿಂದೆ ಜೆಕೆಎಲ್ಎಫ್ ಕಾರ್ಯಕರ್ತರ ಕೈವಾಡವಿದೆ ಎಂಬ ಆರೋಪವಿದೆ.
1990ರ ದಶಕದ ಆರಂಭದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಿಸಿದಂತೆ ಬಗೆಹರಿಯದ ಪ್ರಕರಣಗಳನ್ನು ಮರು ತನಿಖೆ ಮಾಡುವ ಲೆಫ್ಟಿನೆಂಟ್ ಗವರ್ನರ್ ಆಡಳಿತದ ವ್ಯಾಪಕ ಉಪಕ್ರಮದ ಭಾಗವಾಗಿ ಈ ಪ್ರಕರಣವನ್ನು ಪುನಃ ಕೈಗೆತ್ತಿಕೊಳ್ಳಲಾಗಿದೆ. ಈ ಪ್ರಕರಣವನ್ನು ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (TADA) ಮತ್ತು ರಣಬೀರ್ ದಂಡ ಸಂಹಿತೆಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ದಾಖಲಿಸಲಾಗಿದ್ದು, ಅಧಿಕಾರಿಗಳು ಈ ಮರುತನಿಖೆಯನ್ನು ಗಂಭೀರವಾಗಿ ಪರಿಗಣಿಸಿರುವುದನ್ನು ಇದು ತೋರಿಸುತ್ತದೆ. ಐತಿಹಾಸಿಕ ಅಪರಾಧಗಳ ಹಿಂದಿನ ಸತ್ಯವನ್ನು ಬಯಲಿಗೆಳೆಯಲು ಮತ್ತು ನ್ಯಾಯ ಒದಗಿಸಲು ಈ ದಾಳಿಗಳು ಹೊಸ ಬದ್ಧತೆಯನ್ನು ಸೂಚಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



















