ಬೆಂಗಳೂರು: 2024-25ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ ಡಿಸೆಂಬರ್ 2024ರ ಅಂತ್ಯಕ್ಕೆ ಶಿಕ್ಷಕರ ಅಂತಿಮ ಸೇವಾ ಅಂಕಗಳನ್ನು (Weighted Marks) ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದೆ. ಸುತ್ತೋಲೆಯ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
2024-25ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ /ಪ್ರೌಢಶಾಲಾ ಸಹ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ, ಡಿಸೆಂಬರ್ ತಿಂಗಳವರೆಗೂ ನವೀಕರಿಸಿದ ಶಿಕ್ಷಕರ ಸೇವಾ ವಿವರದ ಆಧಾರದ ಮೇಲೆ ಗಣನೆಗೆ ತೆಗೆದುಕೊಂಡು ಕರಡು ವೇಯ್ಟೇಡ್ ಅಂಕಗಳನ್ನು, ಇ.ಇ.ಡಿ.ಎಸ್. ತಂತ್ರಾಂಶದಲ್ಲಿನ ಶಿಕ್ಷಕರ ಲಾಗಿನ್ ನಲ್ಲಿ ಹಾಗೂ ಇಲಾಖಾ ವೆಬ್ಸೈಟ್ ನಲ್ಲಿ ಸೇವಾ ಮಾಹಿತಿಯ ಇಂದೀಕರಣಕ್ಕಾಗಿ ಮಾ. 20ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು.
ಹಾಗೆಯೇ, ಇಇಡಿಎಸ್ನಲ್ಲಿ ಎಲ್ಲ ನೌಕರರ ಮಾಹಿತಿಯನ್ನು ಇಂದೀಕರಣ ಮಾಡಲು ಮಾ. 28ರವರೆಗೆ ಮತ್ತೊಮ್ಮೆ ಅವಕಾಶವನ್ನು ಕಲ್ಪಿಸಲಾಗಿತ್ತು. ಅಲ್ಲದೇ ಇಇಡಿಎಸ್ನಲ್ಲಿ ಇಂದೀಕರಣಕ್ಕಾಗಿ ಈ ಹಿಂದೆ ಹಲವಾರು ಬಾರಿ ಕಾಲಾವಕಾಶವನ್ನು ಕಲ್ಪಿಸಲಾಗಿತ್ತು. ವರ್ಗಾವಣೆಗೆ ಸಂಬಂಧಿಸಿದ ವಿವಿಧ ಕಾರ್ಯಗಳ ನಿರ್ವಹಿಸಬೇಕಾಗಿರುವುದರಿಂದ ಮತ್ತು ಈಗಾಗಲೇ ಇಇಡಿಎಸ್ನಲ್ಲಿ ಮಾಹಿತಿ ಇಂದೀಕರಣಕ್ಕಾಗಿ ಸಾಕಷ್ಟು ಕಾಲಾವಕಾಶವನ್ನು ನೀಡಿರುವುದರಿಂದ ಇನ್ನೂ ಮುಂದೆ ಇಇಡಿಎಸ್ನಲ್ಲಿ ಇಂದೀಕರಣ / ತಿದ್ದುಪಡಿ / ಬದಲಾವಣೆಯನ್ನು ವರ್ಗಾವಣೆಗೆ ಪರಿಗಣಿಸುವುದಿಲ್ಲ.
ಅಂತಿಮವಾಗಿ ಪ್ರಕಟಿಸಲ್ಪಟ್ಟ ಸೇವಾ ಅಂಕಗಳನ್ನೇ ಪ್ರಸಕ್ತ ಸಾಲಿನಲ್ಲಿ ನಡೆಯುವ ವರ್ಗಾವಣೆಯ ಎಲ್ಲಾ ಪ್ರಕ್ರಿಯೆಗಾಗಿ ಪರಿಗಣಿಸಲಾಗುವುದೆಂದು ತಿಳಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ / ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರುಗಳ ಅಂತಿಮ ಸೇವಾ ಅಂಕಗಳನ್ನು (Weighted Score) ಇ.ಇ.ಡಿ.ಎಸ್. ತಂತ್ರಾಂಶದಲ್ಲಿನ ಶಿಕ್ಷಕರ ಲಾಗಿನ್ ಕ್ಷೇತ್ರಶಿಕ್ಷಣಾಧಿಕಾರಿಗಳ /ಉಪನಿರ್ದೇಶಕರ ಲಾಗಿನ್ ಹಾಗೂ ಇಲಾಖಾ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಈ ಮಾಹಿತಿಯನ್ನು ಎಲ್ಲಾ ಶಿಕ್ಷಕರಿಗೆ ತಲುಪಿಸಲು ಕ್ರಮವಹಿಸುವಂತೆ ಇಲಾಖೆಯ ಎಲ್ಲಾ ಕಚೇರಿಯ ಮುಖ್ಯಸ್ಥರಿಗೆ ಇಲಾಖೆ ಸೂಚಿಸಿದೆ.