ಬೆಂಗಳೂರು: ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆ ಹೊರಡಿಸುವುದನ್ನು ತಡೆಹಿಡಿಯಬೇಕೆಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. 2024ರ ಅಕ್ಟೋಬರ್ 28ರ ನಂತರ ನೇರ ನೇಮಕಾತಿಗಾಗಿ ಹಾಗೂ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗಾಗಿ ಯಾವುದೇ ಹೊಸ ಅಧಿಸೂಚನೆಗಳನ್ನು ಹೊರಡಿಸಿದ್ದಲ್ಲಿ ಕೂಡಲೇ ಆಯಾ ನೇಮಕಾತಿ ಪ್ರಾಧಿಕಾರಗಳು ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಸೂಚಿಸಿದೆ.

ಎಕ್ಸ್ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಪೋಸ್ಟ್ ಮಾಡಿದ್ದಾರೆ. “ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆಯನ್ನು ಹೊರಡಿಸಬಾರದೆಂದು ಸೂಚಿಸಲಾಗಿದೆ. ಇದರನ್ವಯ ದಿನಾಂಕ 28-10-2024ರ ನಂತರ ನೇರ ನೇಮಕಾತಿಗಾಗಿ ಅಥವಾ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗಾಗಿ ಯಾವುದೇ ಹೊಸ ಅಧಿಸೂಚನೆಯನ್ನು ಹೊರಡಿಸಿದ್ದರೆ ಈ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲು ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಆದೇಶಿಸಲಾಗಿದೆ”ಎಂದು ತಿಳಿಸಿದ್ದಾರೆ.
ಕೆಲವು ನೇಮಕಾತಿ ಪ್ರಾಧಿಕಾರಿಗಳು ಈ ಸೂಚನೆ ಉಲ್ಲಂಘಿಸಿ ನೇರ ನೇಮಕಾತಿ ಮಾಡಲು ಹೊಸ ಅಧಿಸೂಚನೆಗಳನ್ನು ಹೊರಡಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ 2024ರ ನವೆಂಬರ್ 28ರ ನಂತರ ನೇರ ನೇಮಕಾತಿಗಾಗಿ ಅಥವಾ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗಾಗಿ ಯಾವುದೇ ಹೊಸ ಅಧಿಸೂಚನೆಯನ್ನು ಹೊರಡಿಸಿದ್ದರೆ ತತ್ ಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲು ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಸರ್ಕಾರ ಸೂಚಿಸಿದೆ.