ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿನಲ್ಲೀಗ ಬಣ ರಾಜಕಾರಣ ಶುರುವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಬಣವು ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುತ್ತಿದ್ದರೆ, ಮತ್ತೊಂದು ಬಣವು, ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಎನ್ನುತ್ತಿದ್ದಾರೆ. ಅತ್ತ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕು ಎಂದು ಮತ್ತೊಂದು ಬಣ ಪಟ್ಟು ಹಿಡಿದಿದೆ. ಇದರ ಮಧ್ಯೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ವಿಸ್ತರಣೆಗೆ ತೀರ್ಮಾನಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಹೌದು, ಮಾರ್ಚ್ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು ಹೇಳಿದ್ದಾರೆ. ಇದರಿಂದಾಗಿ ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ ಅವರು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಮತ್ತೆ ಅವರು ಆಪ್ತರಿಗೆ ಮಂತ್ರಿ ಸ್ಥಾನ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ನನಗೂ ಮಂತ್ರಿ ಸ್ಥಾನ ಬೇಕೆಂದ ಕುಲಕರ್ಣಿ
ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಕುರಿತು ಮಾಹಿತಿ ನೀಡಿರುವ ವಿನಯ್ ಕುಲಕರ್ಣಿ ಅವರು, ನನಗೂ ಮಂತ್ರಿ ಸ್ಥಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. “ಮಾರ್ಚ್ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ನನಗೂ ಮಂತ್ರಿ ಸ್ಥಾನ ಬೇಕು. ಅವರು ಕೊಡಬೇಕು, ಕೊಟ್ಟೇ ಕೊಡುತ್ತಾರೆ” ಎಂಬುದಾಗಿ ವಿನಯ್ ಕುಲಕರ್ಣಿ ಹೇಳಿದ್ದಾರೆ. ಆ ಮೂಲಕ ಅವರು ಸಚಿವ ಸ್ಥಾನದ ಕುರ್ಚಿಯ ಮೇಲೆ ಈಗಲೇ ಟವೆಲ್ ಹಾಕಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯು ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಕಾಂಗ್ರೆಸ್ಸಿನಲ್ಲಿ ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈಗ ಸಚಿವ ಸಂಪುಟ ವಿಸ್ತರಣೆ ಮಾಡಿದರೆ, ಸಚಿವ ಸ್ಥಾನದ ಆಕಾಂಕ್ಷಿಗಳು ಬೇಡಿಕೆ ಇಡಲಿದ್ದಾರೆ. ಆಗ ಮತ್ತೆ ಭಿನ್ನಮತ ಇನ್ನಷ್ಟು ದೊಡ್ಡದಾಗುವ ಸಾಧ್ಯತೆ ಇದೆ. ಈಗಾಗಲೇ ಬಿ.ಆರ್.ಪಾಟೀಲ್ ಅವರು ಮುನಿಸಿಕೊಂಡು, ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೊನೆಗೆ ರಾಜ್ಯ ನೀತಿ ಆಯೋಗ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿ ಸಿದ್ದರಾಮಯ್ಯ ಅವರು ಅಸಮಾಧಾನ ತಣಿಸಲು ಯತ್ನಿಸಿದ್ದಾರೆ. ಈಗ ಸಚಿವ ಸಂಪುಟ ವಿಸ್ತರಣೆ ಆದರೆ ಯಾವ ಪ್ರಹಸನಕ್ಕೆ ಕಾರಣವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.