ಬೆಂಗಳೂರು: ಗಾಯಕ ಸೋನು ನಿಗಮ್ ವಿರುದ್ದ ಕರವೇ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.
ಸೋನು ನಿಗಮ್ ರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.

ಕನ್ನಡಿಗರನ್ನು ಹೀಯಾಳಿಸಿದ ಸೋನು ನಿಗಮ್ ಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕೂಡಲೇ ಸೋನು ನಿಗಮ್ ನನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವೇಳೆ ಮಾತನಾಡಿರುವ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಸೋನು ನಿಗಮ್ ಒಬ್ಬ ಹುಚ್ಚ. ಕನ್ನಡ ಹಾಡು ಎಂದಿದ್ದಕ್ಕೆ, ಹಾಡಲ್ಲ ಅಂತ ಹೇಳಬಹುದಿತ್ತು. ಆದರೆ, ಕನ್ನಡವನ್ನು ಕಾಶ್ಮೀರದ ಭಯೋತ್ಪಾದನೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಆತನೊಬ್ಬ ದೊಡ್ಡ ಹುಚ್ಚ ಎಂದು ಗುಡುಗಿದ್ದಾರೆ.
ಸೋನು ವಿರುದ್ಧ ರಾಷ್ಟ್ರ ದ್ರೋಹದ ಕೇಸ್ ನ್ನು ಅವಲಹಳ್ಳಿ ಠಾಣೆಯಲ್ಲಿ ದಾಖಲಿಸಲಾಗಿದೆ. ಹೀಗಾಗಿ ಪೊಲೀಸರು ಬಂಧಿಸಿ ಕರೆದುಕೊಂಡು ಬರಬೇಕು. ಆತನನ್ನು ನಾಲ್ಕು ದಿನವಾದರೂ ಜೈಲಿಗೆ ಕಳುಹಿಸಿದರೆ ಆತ ಪರಿವರ್ತನೆ ಹೊಂದಬಹುದು. ಕರ್ನಾಟಕ ಪೊಲೀಸರು, ಸರ್ಕಾರ ಅವನಿಗೆ ಯಾವುದೇ ರಿಯಾಯಿತಿ ನೀಡಬಾರದು. ಕೂಡಲೇ ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಸೋನು ನಿಗಮ್ ಕೂಡಲೇ ಕ್ಷಮೆಯಾಚಿಸಬೇಕು. ಭಾಷೆ ಭಾವನಾತ್ಮಕ ವಿಚಾರ.ಫಿಲ್ಮ್ ಚೇಂಬರ್ ಅಡ್ಡಗೋಡೆ ಮೇಲೆ ದೀಪ ಇಡಬಾರದು. ಈ ಸಮಯದಲ್ಲಾದರೂ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ನಿರ್ದೇಶಕರು ಈ ರೀತಿಯ ಹುಚ್ಚರಿಗೆ ಅವಕಾಶ ಕೊಡಬಾರದು. ಕನ್ನಡದ ಕಲಾವಿದರಿಗೆ ಅವಕಾಶ ಕೊಡಬೇಕು. ಸೋನು ನಿಗಮ್ ಕನ್ನಡದಲ್ಲಿ ಹಾಡದಂತೆ ನಿರ್ಬಂಧ ಹೇರಬೇಕು. ಕನ್ನಡ ಸಂಕೃತಿ ಇಲಾಖೆ ನಡೆಸುವ ಕಾರ್ಯಕ್ರಮಗಳಲ್ಲಿ ಕನ್ನಡ ಕಲಾವಿದರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.



















