ಬೆಂಗಳೂರು: ಕಾಂತಾರ ಚಾಪ್ಟರ್-1 ಸಿನಿಮಾದ ದೈವಪಾತ್ರದ ಕುರಿತು ಅಪಮಾನಕಾರಿ ಸನ್ನೆ ಮಾಡಿ ಮಾತನಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದೂರುದಾರರೊಂದಿಗೆ ಚರ್ಚಿಸಿ ಅವರಿಗೆ ತೃಪ್ತಿಯಾಗುವ ಭಾಷೆಯಲ್ಲಿ ಪರಿಷ್ಕೃತ ಕ್ಷಮಾಪಣಾ ಪ್ರಮಾಣ ಪತ್ರ ಸಲ್ಲಿಸುವುದಾಗಿ ನಟ ರಣವೀರ್ ಸಿಂಗ್ ಹೈಕೋರ್ಟ್ಗೆ ತಿಳಿಸಿದ್ದಾರೆ.
ಗೋವಾದಲ್ಲಿ ಕೆಲ ತಿಂಗಳ ಹಿಂದೆ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ಕಾಂತಾರ ಚಾಪ್ಟರ್-1 ಚಿತ್ರದ ಚಾಮುಂಡಿ ದೈವಕ್ಕೆ ಅಪಮಾನ ಮಾಡಿದ ಆರೋಪದಡಿ ದಾಖಲಾಗಿರುವ ಖಾಸಗಿ ದೂರು ಮತ್ತು ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ, ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ವಿಚಾರಣೆ ನಡೆಸಿದರು.
ವಿಚಾರಣೆಯ ವೇಳೆ ದೂರುದಾರರ ಪರ ವಕೀಲರು, ಅರ್ಜಿದಾರ ರಣವೀರ್ ಸಿಂಗ್ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಪಶ್ಚಾತ್ತಾಪವಿಲ್ಲ. ದೂರು ನೀಡಿರುವುದೇ ತಪ್ಪು ಎಂಬಂತೆ ಬಿಂಬಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಅರ್ಜಿದಾರರ ಪರ ವಕೀಲರು, ದೂರುದಾರರೊಂದಿಗೆ ಚರ್ಚಿಸಿ ಅವರಿಗೆ ತೃಪ್ತಿಯಾಗುವ ಭಾಷೆಯಲ್ಲಿಯೇ ಪರಿಷ್ಕೃತ ಪ್ರಮಾಣ ಪತ್ರ ಸಲ್ಲಿಸುವುದಾಗಿ ಹೇಳಿದರು.
ಇದನ್ನೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಕ್ಷಮೆಯಾಚನೆಯ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದೇ 18ರಂದು ಮೈಸೂರಿನಲ್ಲಿರುವ ದೇವಸ್ಥಾನಕ್ಕೂ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು. ರಣವೀರ್ ಸಿಂಗ್ ಅವರ ಪ್ರಮಾಣ ಪತ್ರದಲ್ಲಿರುವ ಅಂಶಗಳನ್ನು ಓದಿ ಪೀಠಕ್ಕೆ ತಿಳಿಸಿದರು.
ಪ್ರಮಾಣ ಪತ್ರಕ್ಕೆ ದೂರುದಾರರ ಪರ ವಕೀಲರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಿ ಪರಿಷ್ಕೃತ ಪ್ರಮಾಣ ಪತ್ರ ಸಲ್ಲಿಸುವುದಾಗಿ ಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ದೂರುದಾರರ ತೃಪ್ತಿಗೆ ಅನುಗುಣವಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಮೌಖಿಕವಾಗಿ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿತು.
ಇದನ್ನೂ ಓದಿ: ಗಣಂಗೂರು ಟೋಲ್‌ನಲ್ಲಿ ಸಿಬ್ಬಂದಿಗಳ ಅಟ್ಟಹಾಸ.. ಫಾಸ್ಟ್‌ಟ್ಯಾಗ್‌ನಲ್ಲಿ ಹಣವಿಲ್ಲದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ!



















