ಬೆಂಗಳೂರು: ಗಾಯಕ ಸೋನು ನಿಗಮ್ ಕೊಟ್ಟಿರುವ ಪ್ರತಿಕ್ರಿಯೆಗೆ ಕನ್ನಡಿಗರು ಮತ್ತಷ್ಟು ಗರಂ ಆಗಿದ್ದಾರೆ.
ವಿವಾದಕ್ಕೆ ಫುಲ್ ಸ್ಟಾಪ್ ನೀಡುವ ಬದಲು ಸೋನು ತುಪ್ಪ ಸುರಿದಿದ್ದಾರೆ. ಸ್ಪಷ್ಟನೆ ಕೊಟ್ಟು ಮತ್ತೆ ಕಿಡಿ ಹೆಚ್ಚಿಸಿಕೊಂಡಿದ್ದಾರೆ. ಕನ್ನಡ ಮತ್ತು ಕನ್ನಡಿಗರ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪ ಕೇಳಿ ಬರುತ್ತಿದ್ದಂತೆ ವಿಡಿಯೋ ಬಿಡುಗಡೆ ಮಾಡಿದ್ದ ಸೋನು ನಿಗಮ್, ನಾನು ಭಾಷೆಗೆ ಅವಮಾನ ಮಾಡಿಲ್ಲ. ನಾಲ್ಕೈದು ಜನ ಅಗ್ರೆಸ್ಸಿವ್ ಆಗಿ ನಡೆದುಕೊಂಡರು ಅನ್ನುವುದಾದರೆ ಕನ್ನಡಿಗರನ್ನು ಎಳೆದು ತಂದಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಈಗ ಕನ್ನಡಿಗರು ಸೋನು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋನು ನಿಗಮ್ ತಲೆ ಕೆಟ್ಟಿದೆ ಎಂದು ಕನ್ನಡಿಗರು ಕಮೆಂಟ್ ಮಾಡುತ್ತಿದ್ದಾರೆ. ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಗೂ, ಇಲ್ಲಿ ಕನ್ನಡ…ಕನ್ನಡ ಎಂದು ಕೂಗಿದ್ದಕ್ಕೂ ಏನು ಸಂಬಂಧ? ಹಾಡು ಹಾಡಿ ಎಂದವರನ್ನು ಗೂಂಡಾಗಳು ಅಂದ್ರಾ ಸೋನು ನಿಗಮ್? ಆಗಿರುವ ತಪ್ಪನ್ನ ಸರಿ ಎಂದು ವಾದಿಸಿದ್ರಾ ಸೋನು ನಿಗಮ್? ಹೀಗೆ ಕನ್ನಡಿಗರು ತರಹೇವಾರಿ ಕಮೆಂಟ್ ಮಾಡಿ ಸೋನು ನಿಗಮ್ ರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.